ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಶೀಲ ಶಂಕಿಸಿ ಪತ್ನಿ ಕುತ್ತಿಗೆ ಹಿಸುಕಿ ಕೊಂದು ಶರಣಾದ

| N/A | Published : Mar 27 2025, 01:09 AM IST / Updated: Mar 27 2025, 04:16 AM IST

ಸಾರಾಂಶ

ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಪತಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

 ಬೆಂಗಳೂರು : ಅಕ್ರಮ ಸಂಬಂಧ  ಶಂಕೆ ಹಿನ್ನೆಲೆಯಲ್ಲಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಪತಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಹೆಗಡೆ ನಗರದ ಮೊದಲ ಅಡ್ಡರಸ್ತೆ ನಿವಾಸಿ ಚಂದ್ರಶೇಖರ್ ಬಂಧಿತ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಪತ್ನಿ ವಲ್ಲರಮತಿಯ (35) ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಶರಣಾಗಿದ್ದಾನೆ.

11 ವರ್ಷಗಳ ಹಿಂದೆ ತಮಿಳುನಾಡಿನ ವಲ್ಲರಮತಿ ಹಾಗೂ ಚಂದ್ರಶೇಖರ್ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಹೆಗಡೆ ನಗರದಲ್ಲಿ ದಂಪತಿ ನೆಲೆಸಿದ್ದರು. ಕ್ಯಾಬ್ ಚಾಲಕನಾಗಿ ಚಂದ್ರಶೇಖರ್ ಹಾಗೂ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್‌ ಆಗಿ ವಲ್ಲರಮತಿ ದುಡಿದು ಜೀವನ ಸಾಗಿಸುತ್ತಿದ್ದರು. ಆದರೆ, ಇತ್ತೀಚಿಗೆ ಕೌಟುಂಬಿಕ ವಿಚಾರವಾಗಿ ಸತಿ-ಪತಿ ಮನಸ್ತಾಪವಾಗಿತ್ತು. ತನ್ನ ಪತ್ನಿ ನಡವಳಿಕೆ ಮೇಲೆ ಆತನಿಗೆ ಸಂಶಯ ಮೂಡಿತ್ತು. ಮನೆಯಲ್ಲಿ ಸದಾ ಕಾಲ ಬೇರೊಬ್ಬ ವ್ಯಕ್ತಿ ಜತೆ ಪತ್ನಿ ಮೊಬೈಲ್‌ನಲ್ಲಿ ಮಾತನಾಡುತ್ತಾಳೆ ಎಂದು ಚಂದ್ರಶೇಖರ್‌ ಸಿಟ್ಟಿಗೆ ಕಾರಣವಾಗಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿದ್ದವು.

ತಾಯಿ ಬರುವಷ್ಟರಲ್ಲಿ ಹತ್ಯೆ:  ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮಕ್ಕಳು ಶಾಲೆಗೆ ತೆರಳಿದ ನಂತರ ದಂಪತಿ ಮಧ್ಯೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಪತ್ನಿಯ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಗಲಾಟೆ ಶಬ್ದ ಕೇಳಿ ಎದುರಿನ ಮನೆಯಲ್ಲೇ ನೆಲೆಸಿದ್ದ ಮೃತಳ ತಾಯಿ ಸಹ ಮಗಳ ರಕ್ಷಣೆಗೆ ಧಾವಿಸಿದ್ದಾರೆ. ]

 ಆದರೆ, ಅಷ್ಟರಲ್ಲಿ ಪತ್ನಿಯನ್ನು ಚಂದ್ರಶೇಖರ್ ಹತ್ಯೆ ಮಾಡಿದ್ದ. ಈ ಕೃತ್ಯ ಎಸಗಿದ ನಂತರ ಅರ್ಧ ತಾಸಿನಲ್ಲೇ ಮನೆ ಸಮೀಪದಲ್ಲಿದ್ದ ಸಂಪಿಗೆಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಮೊದಲು ತನ್ನ ಪತ್ನಿ ಹತ್ಯೆಯಾಗಿದೆ ಎಂದು ಪೊಲೀಸರಿಗೆ ಆರೋಪಿ ಹೇಳಿಕೆ ನೀಡಿದ್ದಾನೆ. ಬಳಿಕ ಆತನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.