ಕನ್ನಡಪ್ರಭ ವಾರ್ತೆ ಮಂಡ್ಯ

ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿಯೊಬ್ಬ ಆಕೆಯನ್ನು ವಿಶ್ವೇಶ್ವರಯ್ಯ ನಾಲೆಗೆ ತಳ್ಳಿರುವ ಘಟನೆ ತಾಲೂಕಿನ ಬಿ.ಹುಲ್ಕೆರೆ ಗ್ರಾಮದ ಬಳಿ ನಡೆದಿದೆ.

ಬಿ.ಹುಲ್ಕೆರೆ ಗ್ರಾಮದ ಎಚ್.ಎಸ್.ರೋಜಾ (೨೫) ನಾಲೆಗೆ ತಳ್ಳಲ್ಪಟ್ಟವರು. ಈಕೆಯ ಪತಿ ಎಸ್.ಶಂಕರ ಪತ್ನಿಯನ್ನು ನಾಲೆಗೆ ತಳ್ಳಿದ ಪತಿ. ಈ ವಿಚಾರವಾಗಿ ರೋಜಾ ತಾಯಿ ಪ್ರೇಮ ಅವರು ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ರೋಜಾ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಪತಿ ಶಂಕರ ನಿತ್ಯ ಕುಡಿದು ಬಂದು ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದೇ ಅವನ ಕೆಲಸವಾಗಿದೆ. ಆಕೆಯನ್ನು ಅವಾಚ್ಯಶಬ್ಧದಿಂದ ನಿಂದಿಸಿ, ದೈಹಿಕ-ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪತಿಯ ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು ನೀಡಲು ಹೊರಡುತ್ತಿದ್ದ ವೇಳೆ ಹುಲ್ಕೆರೆ ಗ್ರಾಮದ ಅರಳಿಮರದ ಬಳಿ ವಿಶ್ವೇಶ್ವರಯ್ಯ ನಾಲೆಯ ಬಳಿ ರೋಜಾಳನ್ನು ಅಡ್ಡಹಾಕಿದ ಪತಿ ಶಂಕರ ಆಕೆಯನ್ನು ಕಾಲುವೆಗೆ ತಳ್ಳಿ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ತಾಯಿ ಪ್ರೇಮಾ ಅವರು ಮಗಳಿಗಾಗಿ ಹುಡುಕಿದರೂ ಪತ್ತೆಯಾಗಲಿಲ್ಲ. ಮಗಳನ್ನು ನಾಲೆಗೆ ತಳ್ಳಿರುವ ಶಂಕರ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರೇಮಾ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಸವಾರ ಸಾವು

ಮಳವಳ್ಳಿ: ತಾಲೂಕಿನ ಪಂಡಿತಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ-209ರಲ್ಲಿ ಭಾನುವಾರ ಮಧ್ಯಾಹ್ನ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


ರಾಮನಗರ ತಾಲೂಕಿನ ಕೆ.ಜಿ.ಹೊಸಹಳ್ಳಿ ಗ್ರಾಮದ ಗೋವಿಂದರಾಜು (27) ಮೃತ ವ್ಯಕ್ತಿ. ತನ್ನ ಇಬ್ಬರು ಸ್ನೇಹಿತರೊಂದಿಗೆ ಬೈಕ್ ನಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪಂಡಿತಹಳ್ಳಿ ಬಳಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಗೋವಿಂದರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಹಿಂಬದಿ ಸವಾರರಾದ ಸಾಗರ್ ಮತ್ತು ಶ್ರೀನಿವಾಸ್ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೂಡ್ಸ್ ವಾಹನದಲ್ಲಿ ೨೫ ಜಾನುವಾರುಗಳ ಅಕ್ರಮ ಸಾಗಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ಗೂಡ್ಸ್ ವಾಹನವೊಂದರಲ್ಲಿ ೨೫ ಜಾನುವಾರುಗಳನ್ನು ಅಕ್ರಮವಾಗಿ ತುಂಬಿಕೊಂಡು ಸಾಗಿಸುತ್ತಿದ್ದು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅದನ್ನು ಪತ್ತೆಹಚ್ಚಿರುವುದು ಬೆಳಕಿಗೆ ಬಂದಿದೆ.

ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಗ್ರಾಮದ ಶ್ರೀಭೈರೇಶ್ವರ ಫಂಕ್ಷನ್ ಹಾಲ್ ಬಳಿ ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ೧೮ ಕೋಣಗಳು, ೫ ಎಮ್ಮೆಗಳು, ೧ ಕಂದುಬಣ್ಣದ ಜೆರ್ಸಿ ಹಸು ಮತ್ತು ೧ ಕಪ್ಪು ಬಣ್ಣದ ಹೋರಿ ಇರುವುದು ಕಂಡುಬಂದಿದೆ. ಈ ಸಂಬಂಧ ಕೆ.ಆರ್.ಪೇಟೆ ತಾಲೂಕು ಬೇವಿನಹಳ್ಳಿ ಗ್ರಾಮದ ವಾಹನ ಚಾಲಕ ಕಾರ್ತಿಕ್ (೩೦) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಾಂಡವಪುರ ತಾಲೂಕು ಕ್ಯಾತನಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಸಿ.ಎಂ.ಲಿಂಗರಾಜು ರಾತ್ರಿ ಗಸ್ತಿನಲ್ಲಿದ್ದಾಗ ಫೆ.೧೪ರಂದು ಮುಂಜಾನೆ ೩.೩೦ರ ವೇಳೆಗೆ ಗೂಡ್ಸ್ ಕ್ಯಾಂಟರ್ (ಕೆಎ-೦೯-ಸಿ-೭೨೨೫) ವಾಹನದಲ್ಲಿ ಅಕ್ರಮವಾಗಿ ಹಸುಗಳನ್ನು ತುಂಬಿಕೊಂಡು ಮೈಸೂರು ಕಸಾಯಿಖಾನೆಗೆ ಸಾಗಿಸುತ್ತಿರುವ ಮಾಹಿತಿ ದೊರಕಿತು. ತಕ್ಷಣವೇ ಕಾರ್ಯೋನ್ಮುಖರಾದ ಪೊಲೀಸರು ಸಿಬ್ಬಂದಿಯೊಂದಿಗೆ ಕಡತನಾಳು ಗ್ರಾಮದ ಎಲ್ಲೆಯ ಭೈರವೇಶ್ವರ ಫಂಕ್ಷನ್ ಹಾಲ್ ಬಳಿ ತೆರಳಿದರು. ಮುಂಜಾನೆ ೪.೦೦ ಗಂಟೆ ಸಮಯದಲ್ಲಿ ಅಲ್ಲಿಗೆ ಬಂದಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ಒಟ್ಟು೨೫ ಜಾನುವಾರುಗಳು ಇರುವುದು ಕಂಡುಬಂದಿತು.

ಜಾನುವಾರುಗಳಿಗೆ ನಿಲ್ಲಲು ಮತ್ತು ಮಲಗಲು ಸ್ಥಳಾವಕಾಶವಿಲ್ಲದಿರುವುದು ಹಾಗೂ ಇವುಗಳಿಗೆ ಸರಿಯಾಗಿ ನೀರು ಮತ್ತು ಮೇವು ಕೊಡದ ಕಾರಣ ಬಳಲಿರುವುದು ಕಂಡುಬಂದಿತು. ವಾಹನದ ಚಾಲಕನಿಗೆ ಜಾನುವಾರುಗಳನ್ನು ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಿಗೆಯನ್ನು ಪಡೆದಿದ್ದೀರಾ ಎಂದು ವಿಚಾರಿಸಿದಾಗ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದ್ದಾನೆ. ವಾಹನದ ಚಾಲಕ ಕಾರ್ತೀಕ್‌ನನ್ನು ವಶಕ್ಕೆ ಪಡೆದುಕೊಂಡಿರುವ ಕ್ಯಾತನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.