ತಲಘಟ್ಟಪುರ ಠಾಣೆ ವ್ಯಾಪ್ತಿ ಸಿಸಿಕ್ಯಾಮೆರಾ ಕಣ್ಗಾವಲು

| Published : Jan 28 2024, 01:15 AM IST

ಸಾರಾಂಶ

ತಲಘಟ್ಟಪುರ ಠಾಣೆ ವ್ಯಾಪ್ತಿ ಸಿಸಿಕ್ಯಾಮೆರಾ ಕಣ್ಗಾವಲುಕಮಾಂಡ್ ಸೆಂಟರ್ ಉದ್ಘಾಟನೆ । 101 ಹೈ ಡೆಫನಿಷನ್‌ ಕ್ಯಾಮೆರಾಗಳ ಅಳವಡಿಕೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಗರಿಕ ಸುರಕ್ಷತೆಗಾಗಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಚೇಂಜ್‌ಮೇಕರ್ಸ್‌ ಆಫ್‌ ಕನಕಪುರ ರೋಡ್‌ ಅಸೋಸಿಯೇಷನ್ಸ್‌ (ಸಿಎಂಕೆಆರ್‌ಎ) ಹಾಗೂ ನಗರ ಪೊಲೀಸರು ಸಹಭಾಗಿತ್ವದಲ್ಲಿ ಸ್ಥಾಪಿಸಿರುವ ‘ಗರುಡಾ ಸಿಸಿಟಿವಿ ಕಮಾಂಡ್‌ ಸೆಂಟರ್’ ಅನ್ನು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ಶನಿವಾರ ಉದ್ಘಾಟಿಸಿದರು.

ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಗರುಡ ಸಿಸಿಟಿವಿ ಯೋಜನೆಯಡಿ ಹೈ ಡೆಫಿನಿಷನ್‌ 5ಎಂಪಿ ಐಪಿ ಸಾಮರ್ಥ್ಯವುಳ್ಳ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 101 ಕ್ಯಾಮೆರಾಗಳನ್ನು ಹಾಕಲಾಗಿದೆ. ಇವುಗಳು ಠಾಣೆಯ ಕಮಾಂಡ್‌ ಸೆಂಟರ್‌ಗೆ ಸಂಪರ್ಕ ಹೊಂದಿದ್ದು, ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಾವಳಿಗಳು ಠಾಣೆಯಲ್ಲಿ ಅಳ‍ಡಿಸಿರುವ 955 ಇಂಚಿನ ಎಲ್‌ಇಡಿ ಬೃಹತ್‌ ಪರದೆಯಲ್ಲಿ ನೇರ ಪ್ರಸಾರದಲ್ಲಿ ಬಿತ್ತರವಾಗಲಿದೆ. ಈ ಮೂಲಕ ತಲಘಟ್ಟಪುರ ಠಾಣಾ ಸರಹದ್ದಿನಲ್ಲಿ ಬಿಗಿಯಾದ ಖಾಕಿ ಕಣ್ಗಾವಲಿರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪರಿಚಿತರ ಓಡಾಟ, ರೌಡಿಗಳ ಕಿರುಕುಳ, ಹಫ್ತಾ ವಸೂಲಿ, ಗಲಾಟೆ ಹಾಗೂ ರಸ್ತೆಯಲ್ಲಿ ವಾಹನಗಳಿಗೆ ಸಂಚಾರ ಸಮಸ್ಯೆ ಹೀಗೆ ಸಣ್ಣಪುಟ್ಟ ಘಟನೆ ನಡೆದರೂ ತಕ್ಷಣವೇ ಪೊಲೀಸರಿಗೆ ಮಾಹಿತಿ ಸಿಗಲಿದೆ.

ಈ ಕಮಾಂಡ್ ಸೆಂಟರ್‌ನಲ್ಲಿ ಧನ್ವಿವರ್ಧಕ ಸೌಲಭ್ಯ ಕಲ್ಪಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಧನ್ವಿವರ್ಧಕ ಬಳಸಿಕೊಂಡು ಜನರಿಗೆ ಪೊಲೀಸರು ಸೂಚನೆಗಳನ್ನು ನೀಡಬಹುದಾಗಿದೆ. ರ್ಯಾಪಿಡ್ ಇನ್ಫೋ ಸಲ್ಯೂಷನ್ಸ್‌ ಕಂಪನಿಯು ತಾಂತ್ರಿಕ ನೆರವು ನೀಡಿದೆ. ಇನ್ನು ಕ್ಯಾಮೆರಾಗಳ ಅಳ‍ವಡಿಕೆಗೆ ಕನಕಪುರ ರಸ್ತೆಯ ವಾಣಿಜ್ಯ ಹಾಗೂ ಉದ್ದಿಮೆ ವಲಯವು ಆರ್ಥಿಕ ಸಹಕಾರ ನೀಡಿದೆ. ಈ ಯೋಜನೆಗೆ ನಗರ ಪೊಲೀಸ್ ಆಯುಕ್ತ ದಯಾನಂದ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಶಹಾಪುರ್ ವಾಡ್‌, ಸುಬ್ರಹ್ಮಣ್ಯಪುರ ಉಪ ವಿಭಾಗದ ಎಸಿಪಿ ಎಸ್‌.ಬಿ.ಗಿರೀಶ್, ಇನ್‌ಸ್ಪೆಕ್ಟರ್ ಎನ್‌.ಜಗದೀಶ್ ಹಾಗೂ ಸಿಎಂಕೆಆರ್‌ಎ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಉಪಸ್ಥಿತರಿದ್ದರು.

--

ಕಷ್ಟಕ್ಕೆ ಸಿಲುಕಿದವರಿಗೆ

ತಕ್ಷಣವೇ ಸ್ಪಂದನೆ

ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಲ್ಲದೆ ನಿರ್ಭೀತಿಯಿಂದ ಸ್ಥಳೀಯರು ಜೀವಿಸುವಂತೆ ಮಾಡುವ ಸದ್ದುದ್ದೇಶದಿಂದ ಗರುಡಾ ಸಿಸಿಟಿವಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆ ಕಾಣಲಿದ್ದು, ಸಂಕಷ್ಟಕ್ಕೆ ಸಿಲುಕುವ ಜನರಿಗೆ ತಕ್ಷಣವೇ ನೆರವು ಸಿಗಲಿದೆ.

-ವಿ.ಕೆ.ಶ್ರೀವತ್ಸ, ಕಾರ್ಯದರ್ಶಿ, ಸಿಎಂಕೆಆರ್‌ಎ.