ಸಾರಾಂಶ
ಬೆಂಗಳೂರು : ನೀರಿನ ಟ್ಯಾಂಕರ್ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟು, ಸವಾರ ಗಾಯಗೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಂದ್ರಹಳ್ಳಿ ನಿವಾಸಿ ಆರ್.ಹರೀಶ್ (32) ಮೃತ ಹಿಂಬದಿ ಸವಾರ. ಸವಾರ ಸುಚಿತ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಮುಂಜಾನೆ ಸುಮಾರು 2 ಗಂಟೆಗೆ ಸುಚಿತ್ ತನ್ನ ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಹರೀಶ್ ಅವರನ್ನು ಕೂರಿಸಿಕೊಂಡು ಮಾಗಡಿ ಮುಖ್ಯರಸ್ತೆ ಕಡೆಯಿಂದ ಹೊಸಹಳ್ಳಿ ಕಡೆಗೆ ಹೋಗುವಾಗ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.
ಎದುರು ದಿಕ್ಕಿನಿಂದ ಚಾಲಕ ಬಹಳ ವೇಗವಾಗಿ ನೀರಿನ ಟ್ಯಾಂಕರ್ ವಾಹನ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿ ಸವಾರ ಹರೀಶ್ ಟ್ಯಾಂಕರ್ ವಾಹನದ ಮುಂಭಾಗಕ್ಕೆ ಸಿಲುಕಿದ ಪರಿಣಾಮ ಸುಮಾರು 200 ಮೀಟರ್ ಉಜ್ಜಿಕೊಂಡು ಹೋಗಿದೆ. ಇದರಿಂದ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಗಾಯಾಳುಗಳಿಬ್ಬರನ್ನೂ ಸಮೀಪದ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಹರೀಶ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಘಟನೆ ಬಳಿಕ ಚಾಲಕ ಸ್ಥಳದಲ್ಲೇ ನೀರಿನ ಟ್ಯಾಂಕರ್ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನದ ಮಾಲೀಕ ಪತ್ತೆಯಾಗಿದ್ದು, ಚಾಲಕನ ಮಾಹಿತಿ ಸಿಕ್ಕಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.