ಟೆಕಿಗೆ 24 ತಾಸು ಡಿಜಿಟೆಲ್‌ ಅರೆಸ್ಟ್‌ ಮಾಡಿ 34.69 ಲಕ್ಷ ಸುಲಿಗೆ

| Published : Aug 11 2025, 12:30 AM IST

ಸಾರಾಂಶ

ಮುಂಬೈ ಪೊಲೀಸ್‌ ಮತ್ತು ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ನಗರದ ಟೆಕಿಯೊಬ್ಬರಿಗೆ ಕರೆ ಮಾಡಿರುವ ಸೈಬರ್‌ ವಂಚಕರು 24 ತಾಸು ಟೆಕಿಯನ್ನು ಡಿಜಿಟೆಲ್‌ ಅರೆಸ್ಟ್ ಮಾಡಿ ಬೆದರಿಸಿ ಬರೋಬ್ಬರಿ 34.69 ಲಕ್ಷ ರು. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬೈ ಪೊಲೀಸ್‌ ಮತ್ತು ಜಾರಿ ನಿರ್ದೇಶನಾಲಯದ(ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ನಗರದ ಟೆಕಿಯೊಬ್ಬರಿಗೆ ಕರೆ ಮಾಡಿರುವ ಸೈಬರ್‌ ವಂಚಕರು 24 ತಾಸು ಟೆಕಿಯನ್ನು ಡಿಜಿಟೆಲ್‌ ಅರೆಸ್ಟ್ ಮಾಡಿ ಬೆದರಿಸಿ ಬರೋಬ್ಬರಿ 34.69 ಲಕ್ಷ ರು. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.

ಬಾಬುಸಾಪಾಳ್ಯದ ಮಲ್ಲಪ್ಪ ಲೇಔಟ್‌ ನಿವಾಸಿ ರಾಜಸೇಖರ ರೆಡ್ಡಿ(35) ವಂಚನೆಗೆ ಒಳಗಾದ ಸಾಫ್ಟ್‌ವೇರ್‌ ಇಂಜಿನಿಯರ್‌. ಇವರು ನೀಡಿದ ದೂರಿನ ಮೇರೆಗೆ ನಗರದ ಪೂರ್ವ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಅಪರಿಚಿತ ಸೈಬರ್‌ ವಂಚಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್‌ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ದೂರುದಾರರಾದ ರಾಜಸೇಖರ ರೆಡ್ಡಿ ಅವರಿಗೆ ಜು.5 ರ ಮಧ್ಯಾಹ್ನ 3.35ಕ್ಕೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಈ ವೇಳೆ ಕರೆ ಮಾಡಿದ್ದ ವ್ಯಕ್ತಿ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಬಳಸಿಕೊಂಡು ಕೆಲವರಿಗೆ ಕಿರುಕುಳದ ಮೇಸೆಜ್ ಕಳುಹಿಸುತ್ತಿರುವ ಬಗ್ಗೆ ಮುಂಬೈನ ಕೊಬಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದಿದ್ದಾರೆ. ಇದಕ್ಕೆ ರೆಡ್ಡಿ ಅವರು ಆ ರೀತಿಯ ಕಿರುಕುಳವನ್ನು ನಾನು ಯಾರಿಗೂ ನೀಡಿಲ್ಲ. ಮುಂಬೈನಲ್ಲಿ ನನಗೆ ಪರಿಚಿತ ವ್ಯಕ್ತಿಗಳು ಯಾರೂ ಇಲ್ಲ ಎಂದು ಹೇಳಿದ್ದಾರೆ.

ಪಿಎಂಎಲ್‌ಎ ಕೇಸ್‌ ಎಂದು ಬೆದರಿಕೆ:

ಬಳಿಕ ತಮ್ಮ ವರಸೆ ಬದಲಿಸಿದ ಅಪರಿಚಿತರು, ಹಾಗಾದರೆ ನೀವು ಆ ರೀತಿಯ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದಕ್ಕೆ ನಿರಪೇಕ್ಷಣಾ ಪತ್ರ(ಎನ್‌ಒಸಿ) ನೀಡುತ್ತೇವೆ. ನಿಮ್ಮ ಸಿಮ್‌ ಕಾರ್ಡ್‌ ಮಾಹಿತಿ ಕೊಡಿ ಎಂದಿದ್ದಾರೆ. ಅದರಂತೆ ರೆಡ್ಡಿ ಅವರು ತಮ್ಮ ಸಿಮ್‌ ಕಾರ್ಡ್‌ ಸಂಖ್ಯೆಯ ಮಾಹಿತಿ ನೀಡಿದ್ದಾರೆ. ಬಳಿಕ ವಾಟ್ಸಾಪ್‌ ವಿಡಿಯೋ ಕರೆ ಮಾಡಿರುವ ಮತ್ತೊಬ್ಬ ಅಪರಿಚಿತ ವ್ಯಕ್ತಿ, ನೀವು ನರೇಶ್ ಗೋಯೇಲ್‌ ಎಂಬ ವ್ಯಕ್ತಿಯ ಅಕ್ರಮ ಹಣ ವರ್ಗಾವಣೆ ಆರೋಪದ ಪಿಎಂಎಲ್‌ಎ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಶಂಕಿತರಾಗಿದ್ದೀರಾ ಎಂದು ಬೆದರಿಸಿದ್ದಾನೆ.

24 ತಾಸು ವಿಡಿಯೋ ಕರೆಯಲ್ಲಿ ನಿಗಾ:

ಬಳಿಕ ಇ.ಡಿ.ಅಧಿಕಾರಿಗಳ ಸೋಗಿನ ವಂಚಕರು 24 ತಾಸು ವಾಟ್ಸಾಪ್‌ ವಿಡಿಯೋ ಕರೆಯ ನಿಗಾದಲ್ಲಿ ರೆಡ್ಡಿ ಅವರನ್ನು ಇರಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ನ್ಯಾಲಯದಲ್ಲಿ ವಿಚಾರಣೆ ಇದ್ದು, ತನಿಖೆಗೆ ಸಹಕರಿಸುವಂತೆ ಹೇಳಿದ್ದಾರೆ. ಪ್ರತಿ ಎರಡು ಗಂಟೆಗೊಮ್ಮೆ ನಿಮ್ಮ ಲೋಕೇಶ್‌ ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ. ಇದರಿಂದ ಹೆದರಿದ ರೆಡ್ಡಿ ಅವರು ದುಷ್ಕರ್ಮಿಗಳ ಸೂಚನೆಯನ್ನು ಪಾಲಿಸಿದ್ದಾರೆ.ಬೇಲ್‌ ಠೇವಣಿ ಹೆಸರಲ್ಲಿ ಹಣ ಕಸಿದ ದುರುಳರು

ವಿಚಾರಣೆ ನೆಪದಲ್ಲಿ ದುಷ್ಕರ್ಮಿಗಳು ವಾಟ್ಸಾಪ್‌ ಗ್ರೂಪ್‌ ವಿಡಿಯೋ ಕರೆ ಮಾಡಿ ರೆಡ್ಡಿ ಅವರಿಂದ ಭವಿಷ್ಯ ನಿಧಿ ಖಾತೆ, ಉಳಿತಾಯ ಖಾತೆಗಳು ಹಾಗೂ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದಾರೆ. ನಂತರ ಬೇಲ್‌ ಸೆಕ್ಯೂರಿಟಿ ಠೇವಣಿ ಹೆಸರಿನಲ್ಲಿ ರೆಡ್ಡಿ ಅವರಿಂದ ವಿವಿಧ ಹಂತಗಳಲ್ಲಿ ಒಟ್ಟು 34.69 ಲಕ್ಷ ರು. ವರ್ಗಾಯಿಸಿಕೊಂಡು ಸಂಪರ್ಕ ಕಡಿತಗೊಳಿಸಿಕೊಂಡಿದ್ದಾರೆ ಎಂದು ದೂರುದಾರ ರಾಜಸೇಖರ ರೆಡ್ಡಿ ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ರೆಡ್ಡಿ ಅವರು ಜು.24ರಂದು ನಡೆದ ಘಟನೆ ಬಗ್ಗೆ ತಮ್ಮ ಸಂಬಂಧಿಕರು ಹಾಗೂ ಕುಟುಂಬದ ಸದಸ್ಯರ ಬಳಿ ಹೇಳಿಕೊಂಡಿದ್ದಾರೆ. ಬಳಿಕ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ರೆಡ್ಡಿ ಅವರ ಅರಿವಿಗೆ ಬಂದಿದೆ. ಬಳಿಕ ಸೈಬರ್‌ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಬಳಿಕ ಪೂರ್ವ ವಿಭಾಗದ ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.