ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಬ್ರೇಕ್ ಫೇಲಿನಿಂದ ಚಾಲಕನ ನಿಯಂತ್ರಣದ ತಪ್ಪಿದ ಟೆಂಪೋ ಉರುಳಿ ಬಿದ್ದು ಸುಮಾರು 16 ಮಂದಿ ಗಾಯಗೊಂಡಿರುವ ಘಟನೆ ಸಮೀಪದ ಕೆಸರಕ್ಕಿ ಹಳ್ಳದ ತಿರುವಿನಲ್ಲಿ ಜರುಗಿದೆ.ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅರಳಕೊಪ್ಪ ಗ್ರಾಮದ ಗಾಯಾಳುಗಳು ಬೆಂಗಳೂರಿನಲ್ಲಿ ವಾಸವಾಗಿದ್ದರು. ಒಂದೇ ಕುಟುಂಬದವರು ಭಾನುವಾರ ಟೆಂಪೋದಲ್ಲಿ ಬೆಂಗಳೂರಿನಿಂದ ತಲಕಾಡು, ಗಗನಚುಕ್ಕಿ, ಬರಚುಕ್ಕಿ, ಶಿವನಸಮುದ್ರ ಮುಗಿಸಿ ಮುತ್ತತ್ತಿಗೆ ಹೋಗುತ್ತಿದ್ದ ವೇಳೆ ಟೆಂಪೋ ಬ್ರೇಕ್ ಫೇಲಾದ ಪರಿಣಾಮ ಚಾಲಕ ವಾಹನವನ್ನು ಎಡಭಾಗಕ್ಕೆ ಎಳೆದ ಪರಿಣಾಮ ರಸ್ತೆಯಲ್ಲಿ ಮೊಗಚಿ ಬಿದ್ದು ಈ ಘಟನೆ ಜರುಗಿದೆ.
ಭಾನುವಾರದ ರಜಾ ದಿನ ಕಳೆಯಲು ವಿವಿಧ ಪ್ರವಾಸಿ ಸ್ಥಳಗಳಿಗೆ ಹೋಗಿದ್ದರು. ಮುತ್ತತ್ತಿಗೆ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಘಟನೆ ವಿಷಯ ತಿಳಿದ ಹಲಗೂರು ಪಿಎಸ್ಐ ಬಿ.ಮಹೇಂದ್ರ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗೊಂಡ ವರನ್ನು ಮಳವಳ್ಳಿ ತಾಲೂಕು ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿಯರ್ ಬಾಟಲ್ ನಲ್ಲಿ ರೌಡಿಗಳ ಗುಂಪು ಹೊಡೆದಾಟ
ಶ್ರೀರಂಗಪಟ್ಟಣ:ಕುಡಿದ ಮತ್ತಿನಲ್ಲಿ ರೌಡಿ ಗುಂಪು ಬಿಯರ್ ಬಾಟಲ್‌ನಿಂದ ಹೊಡೆದಾಟ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಟ್ಟಣದ ಸ್ಮೂಕಾ ಲಾಂಜ್ ಹುಕ್ಕಾ ಬಾರ್‌ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಹುಕ್ಕಾ ಬಾರ್‌ನಲ್ಲಿ ತಡರಾತ್ರಿ 1 ಗಂಟೆವರೆಗೂ ಪ್ರತ್ಯೇಕ ಪಾರ್ಟಿ ನಡೆಸುತ್ತಿದ್ದ ಎರಡು ರೌಡಿಶೀಟರ್‌ಗಳ ಗುಂಪುಗಳು ಪಾರ್ಟಿ ಮುಗಿದು ಬಿಲ್ ಕೊಡುವಾಗ ಗಲಾಟೆ ತೆಗೆದು ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭಿಸಿವೆ. ಈ ವೇಳೆ ಎರಡೂ ಗುಂಪುಗಳ ನಡುವೆ ಮಾರಾಮಾರಿಗೆ ಮುಂದಾಗಿ ಬಿಯರ ಬಾಟಲ್‌ಗಳ ಎಸೆತವಾಗಿದೆ.ಸದ್ಯ ಯಾವುದೇ ಪ್ರಾಣಾಪಾಯ, ಅನಾಹುತಗಳು ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಪೊಲೀಸರು ರಾಜಕೀಯ ಒತ್ತಡದಿಂದ ರಾಜೀ ಮಾಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಶ್ರೀರಂಗಪಟ್ಟಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ವೃದ್ಧ ನಾಪತ್ತೆ: ದೂರು ದಾಖಲು
ಶ್ರೀರಂಗಪಟ್ಟಣ:ತಾಲೂಕಿನ ಚಂದಗಾಲು ಗ್ರಾಮದ ತಿಮ್ಮೇಗೌಡ(78) ವೃದ್ಧ ನಾಪತ್ತೆಯಾಗಿರುವ ಬಗ್ಗೆ ಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನನ್ನ ತಂದೆ ಮನೆಯಲ್ಲಿ ಯಾವುದೋ ವಿಚಾರದಲ್ಲಿ ಮಾನಸಿಕವಾಗಿ ಚಿಂತೆಯಿಂದ ಇರುತ್ತಿದ್ದರು. ಕಳೆದ ಅ.31 ರಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಪುತ್ರ ರವಿಕುಮಾರ್ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.ಕಾಣೆಯಾದ ವೇಳೆ ತಿಮ್ಮೇಗೌಡ ತುಂಬು ತೋಳಿನ ಬಿಳಿ ಬಣ್ಣದ ಶರ್ಟ್, ನೀಲಿ ಹಾಗೂ ಕಪ್ಪು ಬಣ್ಣದ ಗೆರೆಗಳುಳ್ಳ ಲುಂಗಿ ಧರಿಸಿದ್ದಾರೆ. ಎಣ್ಣೆಗೆಂಪು ಬಣ್ಣ, ದಪ್ಪನೆಯ ಕೋಲುಮುಖ ಹೊಂದಿದ್ದು, ಇವರ ಬಲಗೈ ಕಿರು ಬೆರಳು ಇರುವುದಿಲ್ಲ. ಬಲಭಾಗದ ಕೆನ್ನೆ ಮೇಲೆ ಕಾರಳ್ಳು ಇದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.