ಸಾರಾಂಶ
ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರು ಘಟನೆ ಬೆಂಗಳೂರಿನ ಸಮ್ಮನಹಳ್ಳಿ ಬಿಎಂಟಿಸಿ ಬಸ್ ಡಿಪೋದ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಳಿಕ ಮರಕ್ಕೆ ಬೈಕ್ ಗುದ್ದಿದ್ದರಿಂದ ಹಿಂಬದಿ ಸವಾರ ಮೃತಪಟ್ಟು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಡದಿ ನಿವಾಸಿ ಚಂದ್ರಶೇಖರ್(28) ಮೃತ ಹಿಂಬದಿ ಸವಾರ. ಸವಾರ ಕಿರಣ್‌ಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಸುಮ್ಮನಹಳ್ಳಿ ಬಿಎಂಟಿಸಿ ಬಸ್ ಡಿಪೋ ಸಮೀಪದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಮೃತ ಚಂದ್ರಶೇಖರ್ ಗಾಲ್ಫ್ ಕೋಚ್ ಆಗಿದ್ದರೆ, ಗಾಯಾಳು ಕಿರಣ್ ಕ್ಯಾಬ್ ಚಾಲಕನಾಗಿದ್ದಾನೆ. ಭಾನುವಾರ ರಾತ್ರಿ ಕಿರಣ್ ತನ್ನ ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಚಂದ್ರಶೇಖರ್‌ನನ್ನು ಕೂರಿಸಿಕೊಂಡು ರಿಂಗ್ ರಸ್ತೆಯಲ್ಲಿ ಲಗ್ಗೆರೆ ಕಡೆಯಿಂದ ಸುಮ್ಮನಹಳ್ಳಿ ಕಡೆಗೆ ಬರುತ್ತಿದ್ದ. ಈ ವೇಳೆ ಅತಿವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ಸುಮ್ಮನಹಳ್ಳಿ ಬಿಎಂಟಿಸಿ ಬಸ್ ಡಿಪೋ ಸಮೀಪದ ಬಾನು ಜಗಜೀವನರಾಮ್ ರೀಸರ್ಚ್ ಮತ್ತು ಟ್ರೈನಿಂಗ್ ಸೆಂಟರ್ ಗೇಟ್ ಎದುರಿನ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಬಳಿಕ ಉಜ್ಜಿಕೊಂಡು ಮುಂದೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಸವಾರರಿಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಗಾಳುಗಳಿಬ್ಬರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಚಂದ್ರಶೇಖರ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸವಾರ ಕಿರಣ್‌ಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಸವಾರ ಕಿರಣ್ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವುಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವಿಚಕ್ರ ವಾಹನ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಲ್ಲತ್ತಹಳ್ಳಿ ನಿವಾಸಿ ಧೃವ(32) ಮೃತ ಸವಾರ. ಭಾನುವಾರ ರಾತ್ರಿ 10.15ರ ಸುಮಾರಿಗೆ ಉತ್ತರಹಳ್ಳಿ ರಸ್ತೆಯ ಬಿಜಿಎಸ್ ಜಂಕ್ಷನ್ ಕಡೆಯಿಂದ ಗ್ಲೋಬಲ್ ವಿಲೇಜ್ ಹಿಂಬದಿ ದ್ವಾರದ ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ.ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಧೃವ್ ಸ್ನೇಹಿತರನ್ನು ಭೇಟಿಯಾಗಲು ರಾತ್ರಿ ದ್ವಿಚಕ್ರ ವಾಹನದಲ್ಲಿ ಗ್ಲೋಬಲ್ ವಿಲೇಜ್ ಕಡೆಗೆ ಹೋಗುತ್ತಿದ್ದರು. ಇದೇ ಸಮಯಕ್ಕೆ ಎದುರಿನಿಂದ ಕಾರೊಂದು ವೇಗವಾಗಿ ಬಂದಿದ್ದು, ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಸವಾರ ಧೃವ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳು ಧೃವನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ತೀವ್ರ ರಕ್ತಸ್ರಾವಾಗಿ ಧೃವ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.ಘಟನೆ ಸಂಬಂಧ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.