ರೇವ್‌ ಪಾರ್ಟಿಯ ವಿಚಾರಣೆಗೆ ಬರಲು ಕಾಲಾವಕಾಶ ಕೇಳಿದ ಆರೋಪಿಗಳು

| Published : May 28 2024, 01:17 AM IST / Updated: May 28 2024, 04:41 AM IST

ರೇವ್‌ ಪಾರ್ಟಿಯ ವಿಚಾರಣೆಗೆ ಬರಲು ಕಾಲಾವಕಾಶ ಕೇಳಿದ ಆರೋಪಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗೆ ಒಂದು ವಾರದ ಅವಕಾಶ ಕೋರಿ ಸಿಸಿಬಿಗೆ ಇಬ್ಬರು ತೆಲುಗು ನಟಿಯರಿಂದ ಮನವಿ ಸಲ್ಲಿಕೆ

 ಬೆಂಗಳೂರು :  ಎಲೆಕ್ಟ್ರಾನಿಕ್ ಸಿಟಿ ಸಮೀಪದ ಫಾರ್ಮ್‌ ಹೌಸ್‌ನಲ್ಲಿ ರೇವ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗೆ ಒಂದು ವಾರದ ಅವಕಾಶ ಕೋರಿ ಸಿಸಿಬಿಗೆ ಇಬ್ಬರು ತೆಲುಗು ನಟಿಯರು ಸೇರಿದಂತೆ ಇತರರು ಮನವಿ ಮಾಡಿದ್ದಾರೆ.

ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ 86 ಮಂದಿ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತು. ಆದರೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ತಪ್ಪಿಗೆ ಮತ್ತೊಬ್ಬ ನಟಿ ಆಶಿ ರಾಯ್‌ಗೆ ಸಿಸಿಬಿ ತನಿಖೆ ಬಿಸಿ ತಟ್ಟಿದೆ.

ಈ ಹಿನ್ನಲೆಯಲ್ಲಿ ವಿಚಾರಣೆಗೆ ಸೋಮವಾರ ಹಾಜರಾಗುವಂತೆ ನಟಿಯರಾದ ಹೇಮಾ, ಆಶಿ ರಾಯ್ ಸೇರಿದಂತೆ ಎಂಟು ಮಂದಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಈ ನೋಟಿಸ್‌ಗೆ ಪ್ರತಿಕ್ರಿಯಿಸಿದ ನಟಿಯರು, ತಮಗೆ ಒಂದು ವಾರ ಸಮಯ ನೀಡುವಂತೆ ಕೋರಿದ್ದಾರೆ. ಇದಕ್ಕೆ ಅನಾರೋಗ್ಯದ ಕಾರಣ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲೆಕ್ಟ್ರಾನಿಕ್ ಸಿಟಿ ಸಮೀಪ ಜಿ.ಆರ್‌.ಫಾರ್ಮ್‌ ಹೌಸ್‌ನಲ್ಲಿ ಆಂಧ್ರಪ್ರದೇಶ ರಾಜ್ಯ ವಿಜಯವಾಡ ಮೂಲದ ವಾಸು ಎಂಬಾತನ ಹುಟ್ಟುಹಬ್ಬದ ನಿಮಿತ್ತ ಮೇ 19ರಂದು ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ದಾಳಿ ನಡೆಸಿತ್ತು.

ಸಿಸಿಬಿ ವಶಕ್ಕೆ ಆರೋಪಿಗಳು

ರೇವ್‌ ಪಾರ್ಟಿ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯವಾಡದ ವಾಸು ಹಾಗೂ ಆತನ ನಾಲ್ವರು ಸ್ನೇಹಿತರನ್ನು ಹೆಚ್ಚಿನ ತನಿಖೆಗೆ ಸಿಸಿಬಿ ವಶಕ್ಕೆ ಪಡೆದಿದೆ. ಹೆಬ್ಬಗೋಡಿ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರನ್ನು ಸಿಸಿಬಿ ತನಿಖೆಗೆ ವರ್ಗಾಯಿಸಲಾಗಿತ್ತು. ಬಳಿಕ ಪ್ರಕರಣದ ತನಿಖೆಗೆ ಆರೋಪಿಗಳನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಸಿಸಿಬಿ ಮನವಿ ಮಾಡಿತು. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.