ಕಲ್ಲು ಎತ್ತಿಹಾಕಿ ಹತ್ಯೆಗೈಯುತ್ತಿದ್ದವನ ಬಂಧನ

| Published : May 27 2024, 01:40 AM IST / Updated: May 27 2024, 04:31 AM IST

arrest 4.jpg
ಕಲ್ಲು ಎತ್ತಿಹಾಕಿ ಹತ್ಯೆಗೈಯುತ್ತಿದ್ದವನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ಬದಿ ಮಲಗುತ್ತಿದ್ದ ಜನರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಹಣ ದೋಚಿದ್ದ ದುಷ್ಕರ್ಮಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು ;  ರಸ್ತೆ ಬದಿ ಮಲಗುತ್ತಿದ್ದ ಜನರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಹಣ ದೋಚಿದ್ದ ದುಷ್ಕರ್ಮಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಸಂತಪುರ ಗುಡ್ಡೆ 5ನೇ ಅಡ್ಡ ರಸ್ತೆ ನಿವಾಸಿ ಎಂ.ಗಿರೀಶ ಅಲಿಯಾಸ್ ಗಿರಿ ಬಂಧಿತನಾಗಿದ್ದು, ಇತ್ತೀಚೆಗೆ ಬನಶಂಕರಿ ಸಮೀಪ ರಸ್ತೆ ಬದಿ ಮಲಗಿದ್ದ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕಿಡಿಗೇಡಿ ಕೊಂದು ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಚಿದಾನಂದ್ ಎಂ.ಗದಗ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.

ವೃತ್ತಿಪರ ಕ್ರಿಮಿನಲ್:  ಆರೋಪಿ ಗಿರಿ ವೃತ್ತಿಪರ ಕ್ರಿಮಿನಲ್ ಆಗಿದ್ದು, 2015ರಿಂದ ಕಾನೂನುಬಾಹಿರ ಕೃತ್ಯಗಳಲ್ಲಿ ಸಕ್ರಿಯವಾಗಿದ್ದಾನೆ. ಈತನ ವಿರುದ್ಧ ಸುಬ್ರಹ್ಮಣ್ಯಪುರ ಹಾಗೂ ಬನಶಂಕರಿ ಠಾಣೆಗಳಲ್ಲಿ ಲೈಂಗಿಕ ದೌರ್ಜನ್ಯ, ದರೋಡೆಗೆ ಸಂಚು ಸೇರಿ 4 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣದಲ್ಲಿ ಆರೋಪಿಗೆ 10 ತಿಂಗಳ ಸಜೆ ಆಗಿತ್ತು. ಶಿಕ್ಷೆ ಅನುಭವಿಸಿ 2020ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರವೂ ದುಷ್ಕೃತ್ಯಗಳನ್ನು ಮುಂದುವರೆಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಗಾರೆ ಕೆಲಸ, ಹೋಟೆಲ್‌ಗಳಲ್ಲಿ ಸಹಾಯಕ ಹೀಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದರೆ ಸುಲಭವಾಗಿ ಮತ್ತೆ ಹಣ ಸಂಪಾದಿಸಲು ಮಾರ್ಕೆಟ್‌, ಮೆಜೆಸ್ಟಿಕ್‌, ರೈಲ್ವೆ ನಿಲ್ದಾಣಗಳಲ್ಲಿ ರಾತ್ರಿ ವೇಳೆ ಮಲಗಿಕೊಳ್ಳುವ ಹಾಗೂ ಮದ್ಯ ಸೇವಿಸಿ ರಸ್ತೆ ಬದಿ ಮಲಗುವ ಜನರಿಂದ ಹಣ ಹಾಗೂ ಬ್ಯಾಗ್ ಕಳವು ಮಾಡುತ್ತಿದ್ದ. ಅಲ್ಲದೆ ಮೆಜೆಸ್ಟಿಕ್ ಹಾಗೂ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಒಂಟಿಯಾಗಿ ಸಂಚರಿಸುವ ಜನರನ್ನು ಬೆದರಿಸಿ ಆರೋಪಿ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಒಂದೇ ವಾರದ ಅ‍ವಧಿಯಲ್ಲಿ ಬನಶಂಕರಿ ಹಾಗೂ ಸಿ.ಟಿ.ಮಾರ್ಕೆಟ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿ ಮಲಗಿದ್ದವರ ಹತ್ಯೆಯಾಗಿದ್ದವು. ಆರಂಭದಲ್ಲಿ ಈ ಎರಡು ಕೃತ್ಯಗಳಲ್ಲಿ ಒಬ್ಬಾತನೇ ಎಸಗಿರುವ ಬಗ್ಗೆ ಪೊಲೀಸರು ಶಂಕಿಸಿದರು. ನಂತರ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೋಷಕರ ತೊರೆದು ಏಕಾಂಗಿ ಜೀವನ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 10 ವರ್ಷಗಳ ಹಿಂದೆ ಮೊದಲ ಪತ್ನಿಯಿಂದ ಪ್ರತ್ಯೇಕವಾಗಿ ಗಿರಿ ತಂದೆ ಎರಡನೇ ವಿವಾಹವಾಗಿದ್ದರು. ಈತನ ತಾಯಿ ಮಗಳ ಜತೆ ಕೇರಳಕ್ಕೆ ತೆರಳಿ ನೆಲೆಸಿದ್ದರು, ತಂದೆ- ತಾಯಿ ದೂರವಾದ ಬಳಿಕ ನಗರದಲ್ಲಿ ಆತ ಒಬ್ಬನೇ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಸಿಗರೆಟ್ ಕೊಡದ ಕಾರಣಕ್ಕೆ ಹತ್ಯೆ

ಬನಶಂಕರಿ 7ನೇ ಹಂತದಲ್ಲಿ ಮೇ 13ರಂದು ರಸ್ತೆ ಬದಿ ಮಲಗಿದ್ದ ವ್ಯಕ್ತಿ ಬಳಿ ಕುಡಿದ ಅಮಲಿನಲ್ಲಿದ್ದ ಗಿರಿ ಸಿಗರೆಟ್ ಕೇಳಿದ್ದಾನೆ. ಆಗ ತನ್ನ ಬಳಿ ಸಿಗರೆಟ್ ಇಲ್ಲವೆಂದು ಆರೋಪಿಗೆ ಅಪರಿಚಿತ ಹೇಳಿದ್ದಾನೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ, ಇದರಿಂದ ಕೆರಳಿದ ಗಿರಿ, ಕೊನೆಗೆ ಅಪರಿಚಿತನನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕದ್ದ ಮೊಬೈಲ್‌ಗಾಗಿ ಗೆಳೆಯನನ್ನೇ ಕೊಂದ

ಇನ್ನು ಸಿಟಿ ಮಾರ್ಕೆಟ್ ಬಳಿ ತನ್ನ ಗೆಳೆಯ ಕಾವೇರಿನಗರದ ಸುರೇಶನನ್ನು ಕೊಲೆ ಮಾಡಿದ್ದ. ಇಬ್ಬರು ಕಳ್ಳತನ ಮಾಡುತ್ತಿದ್ದರು. ಇತ್ತೀಚಿಗೆ ಕಳ‍ವು ಮಾಡಿದ್ದಾಗ ಮೊಬೈಲ್ ವಿಚಾರವಾಗಿ ಈ ಗೆಳೆಯರ ಮಧ್ಯೆ ಮನಸ್ತಾಪವಾಗಿತ್ತು. ಇದೇ ಕಾರಣಕ್ಕೆ ಸುರೇಶ್‌ನನ್ನು ಆತ ಕೊಲೆ ಮಾಡಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ. 

ಮದ್ಯದ ಅಮಲಿನಲ್ಲಿ ಕೊಲೆ

ಆರೋಪಿ ಗಿರಿ ಮದ್ಯ ಹಾಗೂ ಮಾದಕ ವ್ಯಸನಿಯಾಗಿದ್ದು, ಸದಾ ಕಾಲ ಆತ ನಶೆಯಲ್ಲೇ ಇರುತ್ತಿದ್ದ. ರಾತ್ರಿ ವೇಳೆ ಅಮಲಿನಲ್ಲಿದ್ದಾಗಲೇ ಆತ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.