ತನ್ನ ಮನೆ ಮಾರಾಟದ 2 ಕೋಟಿ ರು. ಹಣವನ್ನು ಕೇಳಿದ ಸ್ನೇಹಿತನ ಕೊಂದ ದುರುಳರು ಪೊಲೀಸ್‌ ವಶಕ್ಕೆ

| Published : Jan 14 2025, 01:47 AM IST / Updated: Jan 14 2025, 04:14 AM IST

ಸಾರಾಂಶ

ತನ್ನ ಮನೆ ಮಾರಾಟದ 2 ಕೋಟಿ ರು. ಹಣವನ್ನು ಕೇಳಿದ್ದ ವ್ಯಕ್ತಿಯೊಬ್ಬನನ್ನು ಮೈಸೂರು ಪ್ರವಾಸಕ್ಕೆ ಕರೆದೊಯ್ದು ಹತ್ಯೆ ಗೈದಿದ್ದ ಆತನ ಸ್ನೇಹಿತರು ಏಳು ತಿಂಗಳ ಬಳಿಕ ಬನಶಂಕರಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

 ಬೆಂಗಳೂರು : ತನ್ನ ಮನೆ ಮಾರಾಟದ 2 ಕೋಟಿ ರು. ಹಣವನ್ನು ಕೇಳಿದ್ದ ವ್ಯಕ್ತಿಯೊಬ್ಬನನ್ನು ಮೈಸೂರು ಪ್ರವಾಸಕ್ಕೆ ಕರೆದೊಯ್ದು ಹತ್ಯೆ ಗೈದಿದ್ದ ಆತನ ಸ್ನೇಹಿತರು ಏಳು ತಿಂಗಳ ಬಳಿಕ ಬನಶಂಕರಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಜಯನಗರದ 7ನೇ ಹಂತದ ನಿವಾಸಿ ಆನಂದ್ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತರಾದ ಕುಮಾರಸ್ವಾಮಿ ಲೇಔಟ್‌ನ ಮೊಹಮ್ಮದ್ ಗೌಸ್, ಜಯನಗರದ ನದೀಂ ಪಾಷಾ ಹಾಗೂ ಸೈಯದ್ ನೂರ್ ಪಾಷಾನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. 7 ತಿಂಗಳ ಹಿಂದೆ ಆನಂದ್ ನಾಪತ್ತೆಯಾಗಿದ್ದ ಬಗ್ಗೆ ಪೊಲೀಸರಿಗೆ ಆತನ ಸೋದರ ಸಂಬಂಧಿ ರಘುಪತಿ ರಾಜಗೋಪಾಲ್ ದೂರು ನೀಡಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್ಸ್‌ಪೆಕ್ಟರ್‌ ಬಿ.ಎಂ.ಕೊಟ್ರೇಶಿ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಸ್ವಿಯಾಗಿದ್ದಾರೆ.

ಆಯುರ್ವೇದಿಕ್ ವೈದ್ಯನ ಪುತ್ರ:

ಮೃತ ಆನಂದ್‌ನ ತಂದೆ ಆಯುರ್ವೇದದ ವೈದ್ಯರಾಗಿದ್ದು, ತಮ್ಮ ಕುಟುಂಬದ ಜತೆ ಜಯನಗರದ 7ನೇ ಹಂತದಲ್ಲಿ ನೆಲೆಸಿದ್ದರು. ತನ್ನ ತಂದೆ ತಾಯಿ ನಿಧನರಾದ ಬಳಿಕ ಏಕಾಂಗಿಯಾಗಿದ್ದ ಆನಂದ್, ತನ್ನ ಮನೆಯನ್ನು ಮಾರಲು ಮುಂದಾಗಿದ್ದ. ಆದರೆ ಇದೇ ಮನೆ ಬಗ್ಗೆ ಆತನ ಸೋದರ ಸಂಬಂಧಿ ತಕರಾರು ತೆಗೆದಿದ್ದ ಕಾರಣ ವಿವಾದವಾಗಿತ್ತು. ಈ ವಿವಾದದ ಆಸ್ತಿ ಮಾರಾಟಕ್ಕೆ ಆತನಿಗೆ ಸ್ನೇಹಿತ ಗೌಸ್‌ ಸಹಕರಿಸಿದ್ದ. ಆಗ ಪ್ರಸಾದ್‌ ಎಂಬುವರಿಗೆ 2 ಕೋಟಿ ರು.ಗೆ ರಿಯಲ್ ಎಸ್ಟೇಟ್‌ ಏಜೆಂಟ್‌ಗಳಾದ ಕಿಶೋರ್‌, ಸಂತೋಷ್ ಮೂಲಕ ಗೌಸ್‌ ಮಧ್ಯಸ್ಥಿಕೆಯಲ್ಲಿ ಆನಂದ್ ಮಾರಾಟ ಮಾಡಿದ್ದು, ಮುಂಗಡವಾಗಿ 90 ಲಕ್ಷ ರು. ಹಣವನ್ನು ಸಹ ಪ್ರಸಾದ್ ನೀಡಿದ್ದರು. ಈ ಹಣದಲ್ಲಿ ಕಮಿಷನ್‌ ಆಗಿ ಕಿಶೋರ್ ಹಾಗೂ ಸಂತೋಷ್‌ ಅವರು 11 ಲಕ್ಷ ರು. ಪಡೆದಿದ್ದರು. ಇನ್ನುಳಿದ ಹಣದಲ್ಲಿ 45 ಲಕ್ಷ ರು. ಅನ್ನು ಗೌಸ್‌ಗೆ ಆನಂದ್‌ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತನಗೆ ಹಣ ಮರಳಿಸುವಂತೆ ಗೌಸ್‌ಗೆ ಆನಂದ್ ಒತ್ತಾಯಿಸುತ್ತಿದ್ದ. ಈ ನಡುವೆ ಆನಂದ್‌ ಮನೆಯನ್ನು ಧ್ವಂಸಗೊಳಿಸಿ ಹೊಸ ಕಟ್ಟಡ ಕಟ್ಟಲು ಪ್ರಸಾದ್ ಮುಂದಾಗಿದ್ದರು. ಇದೇ ವೇಳೆ ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದಾಗ ತನಗೆ ಬಾಕಿ ಹಣ ಕೊಡುವಂತೆ ಗೌಸ್‌ ಬಳಿ ಆನಂದ್‌ ಪಟ್ಟು ಹಿಡಿದು ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದ್ದ. ಇದರಿಂದ ಹೆದರಿದ ಗೌಸ್‌, ಸ್ನೇಹಿತ ಆನಂದ್‌ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ. ಅಂತೆಯೇ 2024ರ ಜುಲೈ 9 ರಂದು ಆನಂದ್‌ನನ್ನು ಇಲವಾಲ ಸಮೀಪದ ಕೆಆರ್‌ಎಸ್‌ ಜಲಾಶಯದ ಸಾಗರಕಟ್ಟೆ ಸೇತುವೆ ಬಳಿ ಕರೆದುಕೊಂದು ಹೋಗಿದ್ದು, ನಿದ್ರೆ ಮಂಪರಿನಲ್ಲಿದ್ದ ಆನಂದ್‌ನ ಕುತ್ತಿಗೆಗೆ ನೈಲಾನ್ ಹಗ್ಗದಿಂದ ಬಿಗಿದು ಕೊಲೆ ಮಾಡಿ ಶವವನ್ನು ಲಕ್ಷ್ಮಣ ತೀರ್ಥದ ಹಿನ್ನೀರಿನಲ್ಲಿ ಬಿಸಾಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಕೋರ್ಟ್‌ಗೆ ಹೇಬಿಯಸ್ ಕಾರ್ಪಸ್‌

ಇತ್ತ ತಮ್ಮ ಸಂಪರ್ಕಕ್ಕೆ ಆನಂದ್ ಸಿಗದೆ ಹೋದಾಗ ಆಂತಕಗೊಂಡ ಮೃತನ ಸೋದರ ಸಂಬಂಧಿ ರಘುಪತಿ, ಈ ಬಗ್ಗೆ ಬನಶಂಕರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆಗಲೂ ಕಣ್ಮರೆಯಾದ ಆನಂದ್‌ ಬಗ್ಗೆ ಪೊಲೀಸರಿಂದ ಯಾವುದೇ ಮಾಹಿತಿ ಸಿಗದೆ ಮತ್ತಷ್ಟು ಆಂತಕಗೊಂಡ ರಘುಪತಿ, ಕೊನೆಗೆ ತಮ್ಮ ಸಂಬಂಧಿ ಹುಡುಕಿ ಕೊಡುವಂತೆ ಕೋರಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಗ ನಾಪತ್ತೆಯಾಗಿರುವ ಆನಂದ್‌ನನ್ನು ಶೀಘ್ರ ಪತ್ತೆ ಹಚ್ಚುವಂತೆ ಬನಶಂಕರಿ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು.

 ಮೊಬೈಲ್ ನೀಡಿದ ಸುಳಿವು

ಈ ಕೋರ್ಟ್ ಆದೇಶ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು, ಮೃತನ ಬಗ್ಗೆ ಮಾಹಿತಿ ಕಲೆ ಹಾಕಿದರು. ಆಗ ಆತನ ಮೊಬೈಲ್ ಛತ್ತೀಸ್‌ ಘಡ ರಾಜ್ಯದಲ್ಲಿ ಸಂಪರ್ಕದಲ್ಲಿರುವ ಸುಳಿವು ಸಿಕ್ಕಿತು. ಕೂಡಲೇ ಆ ರಾಜ್ಯಕ್ಕೆ ತೆರಳಿ ಮೃತನ ಮೊಬೈಲ್ ಬಳಸುತ್ತಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ತನಗೆ ಸ್ನೇಹಿತ ಸೈಯ್ಯದ್ ನೂರ್ ಪಾಷಾ ಕೊಟ್ಟಿದ್ದಾಗಿ ಆತ ಹೇಳಿಕೆ ನೀಡಿದ್ದ. ಈ ಮಾಹಿತಿ ಆಧರಿಸಿ ಜಯನಗರದ ಬಳಿಕ ನೂರ್ ಪಾಷನನ್ನು ವಶಕ್ಕೆ ವಿಚಾರಣೆಗೊಳಪಡಿಸಿದಾಗ ಆನಂದ್ ಕೊಲೆ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.