ಬೆಂಗಳೂರು ನಗರದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ತೆರವು ಕಾರ್ಯಾಚರಣೆ ಮುಂದುವರಿಸಿದ ಪಾಲಿಕೆ

| Published : Oct 29 2024, 01:48 AM IST / Updated: Oct 29 2024, 05:38 AM IST

ಸಾರಾಂಶ

ಬೆಂಗಳೂರು ನಗರದಲ್ಲಿ ನಿಯಮ ಮೀರಿ ನಿರ್ಮಾಣಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಸೋಮವಾರವೂ ಮುಂದುವರಿಸಿರುವ ಬಿಬಿಎಂಪಿ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚುವರಿ ಮಹಡಿ ಹಾಗೂ ಪಶ್ಚಿಮ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿತು.

 ಬೆಂಗಳೂರು : ನಗರದಲ್ಲಿ ನಿಯಮ ಮೀರಿ ನಿರ್ಮಾಣಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಸೋಮವಾರವೂ ಮುಂದುವರಿಸಿರುವ ಬಿಬಿಎಂಪಿ, ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೆಚ್ಚುವರಿ ಮಹಡಿ ಹಾಗೂ ಪಶ್ಚಿಮ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿತು.

ಮಹದೇವಪುರ ವಲಯದ ಅಲ್ಫಾ ಗಾರ್ಡನ್‌ನ 5ನೇ ಕ್ರಾಸ್‌ ಸರ್ವೇ ನಂ. 40ರಲ್ಲಿ ಸುರೇಶ್‌ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮತಿಗಿಂತ ಹೆಚ್ಚುವರಿಯಾಗಿ 1 ಮಹಡಿ ನಿರ್ಮಾಣ ಮಾಡಲಾಗಿತ್ತು. ಅದನ್ನು ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಕಟ್ಟಡ ಮಾಲೀಕರಿಗೆ ನೋಟಿಸ್‌ ಕೂಡ ನೀಡಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯಿಸದ ಕಾರಣ ಹೆಚ್ಚುವರಿ 1 ಮಹಡಿ ಮತ್ತು ಹೆಚ್ಚುವರಿಯಾಗಿ ನಿರ್ಮಾಣಗೊಂಡ ಭಾಗಗಳನ್ನು ಬಿಬಿಎಂಪಿ ಅಧಿಕಾರಿಗಳು ಸೋಮವಾರ ಬೆಳಗ್ಗೆ ತೆರವು ಕಾರ್ಯಕ್ಕೆ ಚಾಲನೆ ನೀಡಿದರು.

ಈ ವೇಳೆ ಕಟ್ಟಡ ಮಾಲೀಕರು ವ್ಯತಿರಿಕ್ತ ಭಾಗ ಮತ್ತು ಹೆಚ್ಚುವರಿ ಮಹಡಿಯನ್ನು ತಾವೇ ತೆರವುಗೊಳಿಸುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು. ಹೀಗಾಗಿ ಯಾವುದೇ ಅನಾಹುತ ಸಂಭವಿಸದಂತೆ 10 ದಿನಗಳ ಒಳಗಾಗಿ ತೆರವು ಮಾಡುವಂತೆ ಸೂಚಿಸಿದ ಅಧಿಕಾರಿಗಳು, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು.

ಪಾದಚಾರಿ ಮಾರ್ಗ ಒತ್ತುವರಿ ತೆರವು: ಪಶ್ಚಿಮ ವಲಯ ವ್ಯಾಪ್ತಿಯ ಗಾಂಧಿನಗರದ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ದಿಲೀಪ್‌ ಕುಮಾರ್‌ ಎಂಬುವವರಿಗೆ ಸೇರಿದ ವಾಣಿಜ್ಯ ಕಟ್ಟಡದ ಮೆಟ್ಟಿಲುಗಳನ್ನು ಪಾದಚಾರಿ ಮಾರ್ಗ ಅತಿಕ್ರಮಿಸಿ ನಿರ್ಮಿಸಲಾಗಿತ್ತು. ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಸುಮಾರು 25 ಅಡಿಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಮೆಟ್ಟಿಲು ನಿರ್ಮಿಸಿರುವುದು ಕಂಡು ಬಂದಿದೆ. ಈ ಒತ್ತುವರಿ ತೆರವು ಮಾಡುವಂತೆ ಕಟ್ಟಡ ಮಾಲೀಕರಿಗೆ ಬಿಬಿಎಂಪಿ ತಿಳಿಸಿತ್ತು. ಆದರೆ, ಕಟ್ಟಡ ಮಾಲೀಕ ಒತ್ತುವರಿ ತೆರವು ಮಾಡಿರಲಿಲ್ಲ. ಹೀಗಾಗಿ ಸೋಮವಾರ ಅಧಿಕಾರಿಗಳು ಜೆಸಿಬಿ ಮೂಲಕ ಒತ್ತುವರಿ ತೆರವು ಮಾಡಿದ್ದು, ಅದಕ್ಕಾದ ವೆಚ್ಚವನ್ನು ಭರಿಸುವಂತೆ ಕಟ್ಟಡ ಮಾಲೀಕರಿಗೆ ಸೂಚಿಸಿದ್ದಾರೆ.