ಬೆಂಗಳೂರು: ಫೋಟೋ ಕ್ಲಿಕ್ಕಿಸಿದ ಪೇದೆಯ ಬೆರಳು ಕಚ್ಚಿದ!

| Published : Feb 13 2024, 01:45 AM IST / Updated: Feb 13 2024, 07:56 AM IST

man Attack Traffic Police

ಸಾರಾಂಶ

ಹೆಲ್ಮೆಟ್‌ ಧರಿಸದ್ದಕ್ಕೆ ಫೋಟೋ ಕ್ಲಿಕ್ಕಿಸಿದ ಪೊಲೀಸ್‌ ಪೇದೆಯ ಮೊಬೈಲ್‌ ಕಸಿದ ಬೈಕ್‌ ಸವಾರ, ಆತನನ್ನು ತಡೆದ ಪೇದೆಯ ಕೈ ಬೆರಳು ಕಚ್ಚಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೆಲ್ಮೆಟ್‌ ಧರಿಸದೆ ಬರುವಾಗ ಫೋಟೋ ತೆಗೆಯಲು ಮುಂದಾದ ಕರ್ತವ್ಯ ನಿರತ ಸಂಚಾರ ಪೊಲೀಸ್‌ ಹೆಡ್‌ಕಾನ್‌ಸ್ಟೇಬಲ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆರಳು ಕಚ್ಚಿ, ಹಲ್ಲೆಗೈದು ಬೆದರಿಕೆ ಹಾಕಿದ ದ್ವಿಚಕ್ರ ವಾಹನ ಸವಾರನನ್ನು ವಿಲ್ಸನ್‌ಗಾರ್ಡನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್‌ನ ಸೈಯದ್ ಸಫಿ (28) ಬಂಧಿತ. ಆರೋಪಿ ವಿರುದ್ಧ ವಿಲ್ಸನ್‌ಗಾರ್ಡನ್ ಸಂಚಾರ ಠಾಣೆ ಹೆಡ್‌ಕಾನ್‌ಸ್ಟೇಬಲ್ ಸಿದ್ರಾಮೇಶ್ವರ ಕೌಜಲಗಿ ನೀಡಿದ ದೂರಿನ ಮೇರೆಗೆ ವಿಲ್ಸನ್‌ಗಾರ್ಡನ್ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?
ವಿಲ್ಸನ್‌ ಗಾರ್ಡನ್‌ ಸಂಚಾರ ಠಾಣೆಯ ಹೆಡ್‌ಕಾನ್ಸ್‌ಟೇಬಲ್‌ಗಳಾದ ಸಿದ್ರಾಮೇಶ್ವರ ಕೌಜಲಗಿ ಮತ್ತು ಲೋಕೇಶ್‌ ಅವರು ಸೋಮವಾರ ಡಾ। ಮರೀಗೌಡ ರಸ್ತೆಯ 10ನೇ ಕ್ರಾಸ್‌ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಬೆಳಗ್ಗೆ 11.30ರ ಸುಮಾರಿಗೆ ಆರೋಪಿ ಸೈಯದ್‌ ಸಫಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಅದೇ ಮಾರ್ಗದಲ್ಲಿ ಬಂದಿದ್ದಾನೆ. 

ಇದನ್ನು ನೋಡಿದ ಸಿದ್ರಾಮೇಶ್ವರ ಕೌಜಲಗಿ ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಫೀಲ್ಡ್‌ ಟ್ರಾಫಿಕ್‌ ವೈಯಲೇಷನ್‌ ರಿಪೋರ್ಟ್‌(ಎಫ್‌ಟಿವಿಆರ್‌) ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಇದನ್ನು ನೋಡಿದ ಆರೋಪಿ ಸೈಯದ್‌ ಸಫಿ, ಸಿದ್ರಾಮೇಶ್ವರ ಕೌಜಲಗಿ ಅವರ ಬಳಿ ಬಂದು, ‘ಏಯ್‌, ನನ್ನ ಫೋಟೋ ಏಕೆ ತೆಗೆಯುತ್ತಿರುವೆ? ನನ್ನ ಗಾಡಿಯ ನಂಬರ್‌ ಪ್ಲೇಟ್‌ ಬಿಚ್ಚಿಕೊಡುವೆ. 

ಎಷ್ಟು ಕೇಸ್‌ ಹಾಕುವೆ ಹಾಕು’ ಎಂದು ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಕೌಜಲಗಿ ಮತ್ತು ಲೋಕೇಶ್‌ ಅವರು ಬೆನ್ನಟ್ಟಿ ಆರೋಪಿ ಸೈಯದ್‌ ಸಫಿಯನ್ನು ಹಿಡಿದು ನಿಲ್ಲಿಸಿದ್ದಾರೆ.

ಕಿಯೋಸ್ಕ್‌ಗೆ ಬೆಂಕಿ ಹಾಕುವುದಾಗಿ ಬೆದರಿಕೆ: ಆರೋಪಿಯು ದ್ವಿಚಕ್ರ ವಾಹನವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಕೂಗಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. 

ಈ ವೇಳೆ ದ್ವಿಚಕ್ರ ವಾಹನ ಪಕ್ಕಕ್ಕೆ ನಿಲ್ಲಿಸು ಎಂದು ಕೌಜಲಗಿ ಹೇಳಿದಾಗ, ಆರೋಪಿಯು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. 

ವಿಲ್ಸನ್‌ ಗಾರ್ಡನ್‌ 10ನೇ ಕ್ರಾಸ್‌ನಲ್ಲಿರುವ ಅಂಬ್ರಲಾ (ಕಿಯೋಸ್ಕ್‌)ಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ.ಕೈ ಬೆರಳು ಕಚ್ಚಿ ಗಾಯ

ಮುಖ್ಯ ಪೇದೆ ಕೌಜಲಗಿ ಅವರ ಎಡಗೈ ಹಿಡಿದು ಬೆರಳನ್ನು ಕಚ್ಚಿ ರಕ್ತಗಾಯಗೊಳಿಸಿದ್ದಾನೆ. ಆದರೂ ಕೌಜಲಗಿ ಅವರು ಆರೋಪಿ ಸೈಯದ್‌ ಸಫಿಯನ್ನು ಹಿಡಿದು, ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಗೆ ಕರೆತಂದು ದೂರು ನೀಡಿದ್ದಾರೆ. 

ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.