ಸಾರಾಂಶ
ಬೆಂಗಳೂರು : ಕೌಟುಂಬಿಕ ಕಲಹದಿಂದ ತವರು ಸೇರಿದ್ದ ಪತ್ನಿಯನ್ನು ಪತಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜಪೇಟೆಯ ಎಂ.ಡಿ.ಬ್ಲಾಕ್ ನಿವಾಸಿ ಸೈಯಿದಾ ಫಾಜೀಲ್ ಫಾತೀಮಾ(34) ಕೊಲೆಯಾದ ದುರ್ದೈವಿ. ಶುಕ್ರವಾರ ಬೆಳಗ್ಗೆ ಸುಮಾರು 8.30ಕ್ಕೆ ಈ ಘಟನೆ ನಡೆದಿದೆ. ಘಟನೆ ಬಳಿಕ ಆರೋಪಿ ಪತಿ ತಬ್ರೇಜ್ ಪಾಷಾ(37) ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರ ಎರಡು ವಿಶೇಷ ತಂಡ ರಚಿಸಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ಸಿದ್ಧಾಪುರದ ಸೋಮೇಶ್ವರನಗರ ನಿವಾಸಿ ತಬ್ರೇಜ್ ಮತ್ತು ಸೈಯಿದಾ ಫಾಜೀಲ್ ಫಾತೀಮಾ 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಈ ನಡುವೆ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಇಬ್ಬರು ದೂರಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸೈಯಿದಾ ಚಾಮರಾಜಪೇಟೆಯ ಎಂ.ಡಿ.ಬ್ಲಾಕ್‌ನ ತವರು ಮನೆಯಲ್ಲಿ ನೆಲೆಸಿದ್ದರು. ಜೀವನೋಪಾಯಕ್ಕಾಗಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಈ ನಡುವೆ ದಂಪತಿ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಸಮುದಾಯದ ಧರ್ಮ ಗುರುಗಳು ಇಬ್ಬರಿಗೂ ಬುದ್ಧಿವಾದ ಹೇಳಿ ವಿಚ್ಛೇದನ ಅರ್ಜಿ ವಾಪಾಸ್ ಪಡೆಸಿದ್ದರು. ನಂತರವೂ ಆರೋಪಿ ತಬ್ರೇಜ್ ಆಗಾಗ ಪತ್ನಿ ಮನೆ ಬಳಿ ಗಲಾಟೆ ಮಾಡುತ್ತಿದ್ದ. ಹೀಗಾಗಿ ಎರಡೂ ಕುಟುಂಬಗಳ ಹಿರಿಯರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿದ್ದರು ಎಂದು ತಿಳಿದು ಬಂದಿದೆ.
ಅತ್ತೆಯ ಎದುರೇ ಪತ್ನಿಯ ಕೊಲೆ
ಶುಕ್ರವಾರ ಬೆಳಗ್ಗೆ ಸುಮಾರ 8.30ಕ್ಕೆ ಪತ್ನಿ ಮನೆಗೆ ಬಂದಿರುವ ಆರೋಪಿ ತಬ್ರೇಜ್ ಜಗಳ ಶುರು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೋಪಗೊಂಡಿದ್ದ ತಬ್ರೇಜ್ ಏಕಾಏಕಿ ತನ್ನ ಬಳಿಯಿದ್ದ ಚಾಕು ತೆಗೆದು ಪತ್ನಿ ಸೈಯಿದಾ ತಲೆ, ಕುತ್ತಿಗೆ, ಹೊಟ್ಟೆ ಸೇರಿದಂತೆ ವಿವಿಧೆಡೆ ಹತ್ತಾರು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ವೇಳೆ ಮನೆಯಲ್ಲಿ ಸೈಯಿದಾ ಅವರ ಅನಾರೋಗ್ಯಪೀಡಿತ ತಾಯಿ ಮನೆಯಲ್ಲಿ ಇದ್ದರೂ ಏನು ಮಾಡಲು ಸಾಧ್ಯವಾಗಿಲ್ಲ. ಇನ್ನು ಸಹೋದರ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಈ ಸಮಯದಲ್ಲಿ ಆರೋಪಿ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆ ಬಳಿಕ ಫೇಸ್‌ಬುಕ್ ಲೈವ್!
ಪತ್ನಿ ಸೈಯಿದಾಳ ಬರ್ಬರ ಕೊಲೆ ಬಳಿಕ ಆರೋಪಿ ತಬ್ರೇಜ್ ಫೇಸ್‌ಬುಕ್ ಲೈವ್ ಮಾಡಿ, ಪತ್ನಿಯನ್ನು ಹೇಗೆ ನಿಂದಿಸಿದೆ? ಹೇಗೆ ಆಕೆಯನ್ನು ಕೊಲೆ ಮಾಡಿದ್ದೇನೆ ಎಂಬುದನ್ನು ಹೇಳಿಕೊಂಡು ವಿಕೃತಿ ಮೆರೆದಿದ್ದಾನೆ. ಬಳಿಕ ಚಾಕು ಹಿಡಿದುಕೊಂಡೇ ಮನೆಯಿಂದ ಹೊರಗೆ ಓಡಿದ್ದಾನೆ. ಆರೋಪಿ ತ್ರಬೇಜ್ ಅಪರಾಧ ಹಿನ್ನೆಲೆವುಳ್ಳವನಾಗಿದ್ದಾನೆ. 2016ರಲ್ಲಿ ಕಾಟನ್‌ಪೇಟೆ ಠಾಣೆ ಪೊಲೀಸರು ಸರಗಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದರು ಎಂದು ತಿಳಿದು ಬಂದಿದೆ.