ಸಾರಾಂಶ
ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ಚೌಡಪ್ಪ, 6 ತಿಂಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಶಿವಮಣಿ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದಾಗ, ಪೊಲೀಸರು ಚೌಡಪ್ಪನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಮಂಗಳವಾರ ಮತ್ತೆ ಶಿವಮಣಿಯೊಂದಿಗೆ ಚೌಡಪ್ಪ ಗಲಾಟೆ ಮಾಡಿದ್ದು, ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಕನ್ನಡಪ್ರಭ ವಾರ್ತೆ ಮೈಸೂರು
ಪತ್ನಿಯನ್ನು ಕೊಂದು ಮನೆಯ ನೀರಿನ ಸಂಪ್ ನಲ್ಲಿ ಹಾಕಿ ಆತ್ಮಹತ್ಯೆ ಎಂದು ಕಥೆ ಕಟ್ಟಿದ ಪತಿಯನ್ನು ಮೈಸೂರಿನ ಆಲನಹಳ್ಳಿ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಆಲನಹಳ್ಳಿ ಆಶ್ರಯ ಬಡಾವಣೆ ನಿವಾಸಿ ಚೌಡಪ್ಪ ಬಂಧಿತ ಆರೋಪಿ. ಈತ ತನ್ನ ಪತ್ನಿ ಶಿವಮಣಿ (34) ಕೊಲೆ ಮಾಡಿ, ನೀರಿನ ಸಂಪ್ ಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ಚೌಡಪ್ಪ ಮತ್ತು ಶಿವಮಣಿ 14 ವರ್ಷಗಳ ಹಿಂದೆ ವಿವಾಹವಾಗಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ಚೌಡಪ್ಪ, 6 ತಿಂಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಶಿವಮಣಿ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದಾಗ, ಪೊಲೀಸರು ಚೌಡಪ್ಪನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.ಮಂಗಳವಾರ ಮತ್ತೆ ಶಿವಮಣಿಯೊಂದಿಗೆ ಚೌಡಪ್ಪ ಗಲಾಟೆ ಮಾಡಿದ್ದು, ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ತಾನು ಕೊಲೆ ಮಾಡಿರುವ ವಿಚಾರ ಮುಚ್ಚಿಟ್ಟು, ಶಿವಮಣಿಯನ್ನು ನೀರಿನ ಸಂಪ್ ನಲ್ಲಿ ಹಾಕಿ ಆಕೆಯೇ ಕಾಲು ಜಾರಿ ಸಂಪ್ ಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪೊಲೀಸರು, ಅನುಮಾನಗೊಂಡು ಚೌಡಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.