ವೃದ್ಧ ದಂಪತಿಯನ್ನು ಬೆದರಿಸಿ ಚಿನ್ನ, ಹಣ ದೋಚಿದ್ದವನ ಸೆರೆ

| Published : Apr 04 2024, 02:04 AM IST / Updated: Apr 04 2024, 05:27 AM IST

arrest 3

ಸಾರಾಂಶ

ವೃದ್ಧ ದಂಪತಿಗೆ ಜೀವ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದ ವೃತ್ತಿಪರ ಕ್ರಿಮಿನಲ್‌ವೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

 ಬೆಂಗಳೂರು : ರಂಜಾನ್ ಹಬ್ಬದ ದಿನಸಿ ಕಿಟ್ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ವೃದ್ಧ ದಂಪತಿಗೆ ಜೀವ ಬೆದರಿಕೆ ಹಾಕಿ ಚಿನ್ನಾಭರಣ ದೋಚಿದ್ದ ಕಿಡಿಗೇಡಿಯೊಬ್ಬನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯದ ಅಬ್ದುಲ್ಲಾ ಬಂಧಿತನಾಗಿದ್ದು, ಆರೋಪಿಯಿಂದ 20 ಗ್ರಾಂ ಚಿನ್ನ ಹಾಗೂ ಹಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಆನೆಪಾಳ್ಯದಲ್ಲಿ ವೃದ್ಧ ರಶೀದ್ ದಂಪತಿಗೆ ಬೆದರಿಸಿ ₹5 ಸಾವಿರ ಹಾಗೂ 20 ಗ್ರಾಂ ಚಿನ್ನ ದೋಚಿ ಅಬ್ದುಲ್ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೃತ್ತಿಪರ ವಂಚಕ

ಅಬ್ದುಲ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ 12ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ವಾಸವಾಗಿದ್ದ ಅಬ್ದುಲ್ಲಾ, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ಮಾರ್ಗ ತುಳಿದಿದ್ದ. ವೃದ್ಧರಿಗೆ ಸರ್ಕಾರದ ಪಡಿತರ ಚೀಟಿ, ಮಾಸಾಶನ ಹಾಗೂ ದಿನಸಿ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಬಳಿಕ ಅವರಿಗೆ ಚಾಕು ತೋರಿಸಿ ಬೆದರಿಸಿ ನಗ-ನಾಣ್ಯ ದೋಚುವುದು ಆತನ ಕೃತ್ಯವಾಗಿತ್ತು. ಇದೇ ರೀತಿಯ ಪ್ರಕರಣದಲ್ಲಿ ಆತನನ್ನು ಬಂಧಿಸಿ ತಿಲಕನಗರ ಠಾಣೆ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಕಳೆದ ಮಾ.21ರಂದು ಜಾಮೀನು ಪಡೆದು ಜೈಲಿನಿಂದ ಹೊರಬಂದ ಅಬ್ದುಲ್ಲಾ, ಮಾ.26ರಂದು ಆನೇಪಾಳ್ಯಕ್ಕೆ ಬಂದಿದ್ದ. ಆ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ರಶೀದ್‌ ದಂಪತಿಯನ್ನು ಅಡ್ಡಗಟ್ಟಿದ ಆರೋಪಿ, ರಂಜಾನ್ ಹಬ್ಬದ ಕಿಟ್ ಹಂಚುತ್ತಿದ್ದಾರೆ. ನಿಮಗೆ ಸಿಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾನೆ. ಆಗ ಇಲ್ಲವೆಂದಾಗ ತಾನೇ ಕೊಡಿಸುವುದಾಗಿ ಹೇಳಿದ ಅಬ್ದುಲ್ಲಾ, ಅಜ್ಜಿಯನ್ನು ಅಲ್ಲೇ ನಿಲ್ಲಿಸಿ ರಶೀದ್‌ನನ್ನು ಕರೆದುಕೊಂಡು ಹೋಗಿದ್ದಾನೆ.

ಅಲ್ಲಿಂದ ಸ್ವಲ್ಪ ದೂರವಾದ ಬಳಿಕ ತಾತನಿಗೆ ಚಾಕು ತೋರಿಸಿ ಬೆದರಿಸಿ ₹5 ಸಾವಿರ ಕಸಿದುಕೊಂಡ ಅಬ್ದುಲ್ಲಾ, ನಂತರ ಅವರ ಪತ್ನಿ ಬಳಿ ಬಂದು ನಿಮ್ಮ ಗಂಡನಿಗೆ ಮಣ ಭಾರದ ಕಿಟ್‌ ಹೊತ್ತುಕೊಂಡು ಬರಲು ಆಗುತ್ತಿಲ್ಲ ಎಂದು ಹೇಳಿ ಅವರನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ರಶೀದ್ ಪತ್ನಿಗೆ ಜೀವ ಬೆದರಿಕೆ ಹಾಕಿ 20 ಗ್ರಾಂ ಆಭರಣವನ್ನು ಕಸಿದು ಆತ ಪರಾರಿಯಾಗಿದ್ದ. ಈ ಕೃತ್ಯ ಎಸಗಿದ ಬಳಿಕ ಗುರಪ್ಪನಪಾಳ್ಯದ ತನ್ನ ಮನೆಗೆ ಅಬ್ದುಲ್ಲಾ ತೆರಳಿದ್ದ. ದೂರಿನ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿ ಜಾಡು ಹಿಡಿದಿದ್ದಾರೆ.