ಕೆಲಸಕ್ಕಿದ್ದ ಹೊಟೇಲ್‌ಗೆ ಕನ್ನ ಹಾಕಿದ ಮ್ಯಾನೇಜರ್‌ ಬಂಧನ : ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತು ಕಳವು

| Published : Jan 14 2025, 07:17 AM IST

jail
ಕೆಲಸಕ್ಕಿದ್ದ ಹೊಟೇಲ್‌ಗೆ ಕನ್ನ ಹಾಕಿದ ಮ್ಯಾನೇಜರ್‌ ಬಂಧನ : ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತು ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ತಾನು ಕೆಲಸ ಮಾಡುವ ಹೋಟೆಲ್‌ನಲ್ಲೇ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಕಳವು ಮಾಡಿದ್ದ ಮ್ಯಾನೇಜರ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಸುಮಾರು 4.50 ಲಕ್ಷ ರು. ಮೌಲ್ಯದ ಹಿತ್ತಾಳೆ ವಸ್ತಗಳನ್ನು ಜಪ್ತಿ ಮಾಡಿದ್ದಾರೆ.

 ಬೆಂಗಳೂರು : ತಾನು ಕೆಲಸ ಮಾಡುವ ಹೋಟೆಲ್‌ನಲ್ಲೇ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಕಳವು ಮಾಡಿದ್ದ ಮ್ಯಾನೇಜರ್‌ನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಸುಮಾರು 4.50 ಲಕ್ಷ ರು. ಮೌಲ್ಯದ ಹಿತ್ತಾಳೆ ವಸ್ತಗಳನ್ನು ಜಪ್ತಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಮೊಹಮ್ಮದ್‌ ಸಫ್ವಾನ್‌ (26) ಬಂಧಿತ. ಬಿಟಿಎಂ 1ನೇ ಹಂತದ ಭುವನಪ್ಪ ಲೇಔಟ್‌ನ ಟೆರೆಸ್‌ ಕೆಫೆ ಎಂಬ ಹೋಟೆಲ್‌ನಲ್ಲಿ ಇತ್ತೀಚೆಗೆ ತಾಮ್ರ ಮತ್ತು ಹಿತ್ತಾಳೆ ವಸ್ತುಗಳು ಕಳ್ಳತನವಾಗಿದ್ದವು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇನ್ಸ್‌ಪೆಕ್ಟರ್‌ ಎಂ.ಎ.ಮೊಹಮ್ಮದ್‌ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಲೀಕರ ಕಣ್ತಪ್ಪಿಸಿ ಕಳವು:

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಸುನತ್‌ ಕೆರೆ ಗ್ರಾಮದ ಆರೋಪಿ ಮೊಹಮ್ಮದ್ ಸಫ್ವಾನ್‌ ಪದವಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದಾನೆ. ಕಳೆದ ಎರಡು ತಿಂಗಳಿಂದ ನಗರದ ಟೆರೆಸ್‌ ಕೆಫೆ ಹೋಟೆಲ್‌ನಲ್ಲಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ. ಹೋಟೆಲ್‌ನ ತಾಮ್ರ ಮತ್ತು ಹಿತ್ತಾಳೆ ವಸ್ತುಗಳ ಮೇಲೆ ಕಟ್ಟಿದ್ದ ಆರೋಪಿಯು ಹೋಟೆಲ್‌ನಲ್ಲಿ ಮಾಲೀಕರು ಹಾಗೂ ಸಿಬ್ಬಂದಿ ಕಣ್ತಪ್ಪಿಸಿ ಒಂದೊಂದೇ ವಸ್ತುಗಳನ್ನು ಕಳವು ಮಾಡಿದ್ದ.

ಮಾಲೀಕರಿಂದ ದೂರು:

ಕದ್ದ ಮಾಲುಗಳ ಪೈಕಿ ಕೆಲವನ್ನು ಕಾಟನ್‌ಪೇಟೆಯ ಗುಜರಿಯಲ್ಲಿ ಮಾರಾಟ ಮಾಡಿದ್ದ. ಉಳಿದ ವಸ್ತುಗಳನ್ನು ಸ್ವಂತ ಊರಿನ ಮನೆಯಲ್ಲಿ ಇರಿಸಿದ್ದ. ಹೋಟೆಲ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆ ವಸ್ತುಗಳು ಕಳುವಾಗುತ್ತಿರುವುದನ್ನು ಗಮನಿಸಿ ಹೋಟೆಲ್‌ ಮಾಲೀಕರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಬಳಿಕ ತನಿಖೆಗೆ ಇಳಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಈ ವೇಳೆ ಹೋಟೆಲ್‌ನ ಮ್ಯಾನೇಜರ್‌ ಮೊಹಮ್ಮದ್‌ ಸಫ್ವಾನ್‌ ಮೇಲೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಗುಜರಿ, ಮನೆಯಿಂದ ವಸ್ತುಗಳ ಜಪ್ತಿ:

ಆರೋಪಿ ನೀಡಿದ ಮಾಹಿತಿ ಮೇರೆಗೆ ಕಾಟನ್ ಪೇಟೆಯ ಗುಜರಿಯಿಂದ ಎರಡು ಹಿತ್ತಾಳೆ ದೀಪುಗಳು, ಒಂದು ಹಿತ್ತಾಳೆ ಟೇಬಲ್‌, 10 ತಾಮ್ರದ ಜಗ್ಗುಗಳು, 85 ತಾಮ್ರದ ಲೋಟಗಳು, ಒಂದು ಹಿತ್ತಾಳೆ ಗಣೇಶನ ಮುಖವಿರುವ ವೀಣೆ ಜಪ್ತಿ ಮಾಡಲಾಗಿದೆ. ಆರೋಪಿಯ ಸ್ವಂತ ಊರಿನ ಮನೆಯಲ್ಲಿ 19 ತಾಮ್ರದ ಬೌಲ್‌ಗಳು, ಕೃಷ್ಣ, ಹಸು ಇರುವ ಹಿತ್ತಾಳೆ ದೇವರ ವಿಗ್ರಹಗಳನ್ನು ಜಪ್ತಿ ಮಾಡಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: 

 ಬೆಂಗಳೂರು : ನಗರದ ಗಾರ್ಮೆಂಟ್ಸ್‌ ಫ್ಯಾಕ್ಟರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಭಾರೀ ಪ್ರಮಾಣದ ಬಟ್ಟೆಗಳು ಹಾಗೂ ಯಂತ್ರೋಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಾಗಸಂದ್ರ ರುಕ್ಮಿಣಿನಗರದ ಆರ್ಯ ಫ್ಯಾಷನ್ಸ್‌ ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಸೋಮವಾರ ಮುಂಜಾನೆ ದುರಂತ ನಡೆದಿದ್ದು, ಬೆಂಕಿ ಅವಘಡದ ವೇಳೆ ಫ್ಯಾಕ್ಟರಿಯಲ್ಲಿ ಯಾರೂ ಇರದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಭಾರೀ ಪ್ರಮಾಣದ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿವೆ. ಕಟ್ಟಡಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರುಣ್‌ ಶಿವಕುಮಾರ್‌ ಮಾಲೀಕತ್ವದ ಆರ್ಯ ಫ್ಯಾಷನ್ಸ್‌ ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ಕೆಲವೇ ಕ್ಷಣಗಳಲ್ಲಿ ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾರ್ಟ್‌ ಸರ್ಕಿಟ್‌ ಶಂಕೆ:

ಕಾರ್ಖಾನೆಯಲ್ಲಿ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ಅವಘಡದಲ್ಲಿ ಬಟ್ಟೆಗಳು, ಹೊಲಿಗೆ ಯಂತ್ರಗಳು, ಪೀಠೋಪಕರಣಗಳು, ಕಚ್ಚಾ ಪದಾರ್ಥಗಳು ಸೇರಿದಂತೆ ಸುಮಾರು ಮೂರು ಕೋಟಿ ರು. ಮೌಲ್ಯದ ವಸ್ತುಗಳು ನಷ್ಟವಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟ ಐವರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ 4 ವರ್ಷ ಮಗು ಸೇರಿ ಐವರು ಗಾಯಗೊಂಡಿರುವ ಘಟನೆ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ನಡೆದಿದೆ.

ಅಸ್ಸಾಂ ಮೂಲದ ಬಿಜುದಾಸ್‌ (34), ಪತ್ನಿ ಅಂಜಲಿ ದಾಸ್‌ (27), ಪುತ್ರಿ ಮನುಶ್ರೀ (4), ಪಕ್ಕದ ಮನೆಯ ಶೋಭಾ (40) ಮತ್ತು ಮನೋಜ್‌ ಕುಮಾರ್‌ (34) ಗಾಯಗೊಂಡವರು. ಈ ಪೈಕಿ ಬಿಜುದಾಸ್‌ ಮತ್ತು ಅಂಜಲಿಗೆ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಗಂಭೀರವಾಗಿದೆ. ಐವರು ಗಾಯಾಳುಗಳಿಗೂ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಕದ ಮನೆಯವರಿಗೆ ಚುಚ್ಚಿದ ಕಿಟಕಿ ಗಾಜು:

ಅಸ್ಸಾಂ ಮೂಲದ ಬಿಜು ದಾಸ್‌ ದಂಪತಿ ಚೊಕ್ಕಸಂದ್ರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಭಾನುವಾರ ರಾತ್ರಿ ಊಟ ಮಾಡಿ ನಿದ್ದೆಗೆ ಜಾರಿದ್ದರು. ಸೋಮವಾರ ಬೆಳಗ್ಗೆ ಸುಮಾರು 8.25ಕ್ಕೆ ಅಂಜಲಿ ದಾಸ್‌ ಹಾಲು ಕಾಯಿಸಲು ಗ್ಯಾಸ್‌ ಸ್ಟೌವ್‌ ಆನ್‌ ಮಾಡಿ ಲೈಟರ್‌ ಅದುಮಿದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡು ಭಾರೀ ಸ್ಫೋಟ ಸಂಭವಿಸಿದೆ. ಈ ವೇಳೆ ಮನೆ ಬಾಗಿಲ ಬಳಿ ಆಟದಲ್ಲಿ ನಿರತಳಾಗಿದ್ದ ಪುತ್ರಿ ಮನುಶ್ರೀ ಮತ್ತು ಮನೆಯೊಳಗಿದ್ದ ಪತಿ ಬಿಜು ದಾಸ್‌ ಗಾಯಗೊಂಡಿದ್ದಾರೆ. ಸ್ಫೋಟದ ರಭಸಕ್ಕೆ ಕಿಟಕಿ ಗಾಜುಗಳು ಛಿದ್ರಗೊಂಡಿದ್ದು, ಪಕ್ಕದ ಮನೆಯ ನಿವಾಸಿಗಳಾದ ಶೋಭಾ ಮತ್ತು ಮನೋಜ್‌ ಕುಮಾರ್‌ಗೆ ಚುಚ್ಚಿವೆ.

ಸ್ಫೋಟದ ರಭಸಕ್ಕೆ ಬಿಜುದಾಸ್‌ ಮನೆ ಸೇರಿದಂತೆ ಐದಾರು ಮನೆಗಳಿಗೆ ಹಾನಿಯಾಗಿದ್ದು, ಭಾರೀ ಸ್ಫೋಟದಿಂದ ಬೆಚ್ಚಿದ ಸ್ಥಳೀಯರು ತಕ್ಷಣ ಘಟನಾ ಸ್ಥಳಕ್ಕೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಆಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.