ಸಾರಾಂಶ
ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಹಲ್ಲೆಗೈದು ಎರಡು ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾದ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೆ.24ರ ಮುಂಜಾನೆ ಸುಮಾರು 3.30ಕ್ಕೆ ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಎಸ್‌ಬಿಎಂ ಸರ್ಕಲ್ ಬಳಿಯ ಸಾರ್ವಜನಿಕ ಶೌಚಾಲಯದ ಬಳಿ ಈ ಘಟನೆ ನಡೆದಿದೆ. ಸದಾಶಿವನಗರದ ನಿವಾಸಿ ಎಂ.ಜಿ.ಜ್ಯೋತಿರ್ಗಗನ್ ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ: ದೂರುದಾರ ವಿದ್ಯಾರ್ಥಿಗಳಾದ ಜ್ಯೋತಿರ್ಗಗನ್ ಹಾಗೂ ಅನಿಶಾಂತ್ ಸೆ.23ರಂದು ರಾತ್ರಿ 11.30ಕ್ಕೆ ಸ್ನೇಹಿತರನ್ನು ಭೇಟಿಯಾಗಲು ಎಂ.ಜಿ.ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗೆ ಬಂದಿದ್ದಾರೆ. ಇವರು ಬರುವ ವೇಳೆಗೆ ಸ್ನೇಹಿತರು ಮನೆಗೆ ತೆರಳಿದ್ದರಿಂದ ಸ್ವಲ್ಪ ಸಮಯ ಸುತ್ತಾಡಿಕೊಂಡು ಇಬ್ಬರು ದ್ವಿಚಕ್ರ ವಾಹನದಲ್ಲಿ ಮನೆಗೆ ಕಡೆಗೆ ಹೊರಟ್ಟಿದ್ದಾರೆ.
ಮುಂಜಾನೆ ಸುಮಾರು 3.30ಕ್ಕೆ ಸೇಂಟ್ ಮಾರ್ಕ್ಸ್ ರಸ್ತೆ ಎಸ್‌ಬಿಎಂ ಸರ್ಕಲ್ ಬಳಿಯ ಸಾರ್ವಜನಿಕ ಶೌಚಾಲಯದ ಬಳಿ ತೆರಳುವಾಗ, ನಂಬರ್ ಪ್ಲೇಟ್ ಇಲ್ಲದ ಕೆಟಿಎಂ ಡ್ಯೂಕ್ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಏಕಾಏಕಿ ಜ್ಯೋತಿರ್ಗಗನ್‌ನ ಕುತ್ತಿಗೆಗೆ ಕೈ ಹಾಕಿ 28 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಬೆನ್ನಟ್ಟಿದಾಗ ಹಲ್ಲೆ ನಡೆಸಿ ಸರ ಸುಲಿಗೆ: ಜ್ಯೋತಿರ್ಗಗನ್ ಮತ್ತು ಅನಿಶಾಂತ್ ದುಷ್ಕರ್ಮಿಗಳನ್ನು ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿದ್ದಾರೆ. ಕಲಾಸಿಪಾಳ್ಯ ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲಿ ಮತ್ತೆ ಎದುರಾದ ದುಷ್ಕರ್ಮಿಗಳು, ಅನಿಶಾಂತ್ ಮೇಲೆ ಹಲ್ಲೆ ಮಾಡಿ ಆತನ ಕುತ್ತಿಗೆಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಬಳಿಕ ಆತನ ಪರ್ಸ್‌ನಲ್ಲಿದ್ದ ₹150 ನಗದು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಜ್ಯೋತಿರ್ಗಗನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.