ಮದ್ದೂರು : ಅಪರಿಚಿತ ಮಹಿಳೆ ಕೊಲೆ ಮಾಡಿ ಕೊಲ್ಲಿ ಹಳ್ಳದಲ್ಲಿ ನೀರಿಗೆ ಎಸೆದ ದುಷ್ಕರ್ಮಿಗಳು...!

| N/A | Published : Jan 28 2025, 12:45 AM IST / Updated: Jan 28 2025, 04:17 AM IST

ಸಾರಾಂಶ

ಮದ್ದೂರು ಪಟ್ಟಣದ ಶಿವಪುರದ ಪೂರ್ಣ ಪ್ರಜ್ಞ ಕಾನ್ವೆಂಟ್ ಸಮೀಪದ ಕೊಲ್ಲಿ ಹಳ್ಳದಲ್ಲಿ ಅಪರಿಚಿತ ವಿವಾಹಿತ ಮಹಿಳೆಯನ್ನು ಹತ್ಯೆ ಮಾಡಿ ನೀರಿಗೆ ಎಸೆದಿದ್ದು, ಕೊಳೆತ ಶವ ಸೋಮವಾರ ಪತ್ತೆಯಾಗಿದೆ.ಮೃತ ಮಹಿಳೆಗೆ ಸುಮಾರು 35 ವರ್ಷವಾಗಿದೆ.

 ಮದ್ದೂರು : ಪಟ್ಟಣದ ಶಿವಪುರದ ಪೂರ್ಣ ಪ್ರಜ್ಞ ಕಾನ್ವೆಂಟ್ ಸಮೀಪದ ಕೊಲ್ಲಿ ಹಳ್ಳದಲ್ಲಿ ಅಪರಿಚಿತ ವಿವಾಹಿತ ಮಹಿಳೆಯನ್ನು ಹತ್ಯೆ ಮಾಡಿ ನೀರಿಗೆ ಎಸೆದಿದ್ದು, ಕೊಳೆತ ಶವ ಸೋಮವಾರ ಪತ್ತೆಯಾಗಿದೆ.ಮೃತ ಮಹಿಳೆಗೆ ಸುಮಾರು 35 ವರ್ಷವಾಗಿದೆ. ಗೃಹಿಣಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ ನಂತರ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಲ್ಲಿ ಹಳ್ಳದ ನೀರಿಗೆ ಎಸೆದು ಪರಾರಿಯಾಗಿದ್ದಾರೆ. ಕೊಲೆಯಾದ ಮಹಿಳೆಯ ಮೈ ಮೇಲೆ ಮಾಂಗಲ್ಯ ರಹಿತ ಮಣಿಸರ ಇದ್ದು, ಎಡಗೈ ಮತ್ತು ಬಲಗಾಲಿನ ಮೇಲೆ ಹಸಿರು ಹೂವಿನ ಹಚ್ಚೆ ಗುರುತು ಇದೆ.

ಮಧ್ಯಾಹ್ನ ಮೀನು ಹಿಡಿಯಲು ತೆರಳಿದ್ದವರು ನದಿ ನೀರಿನಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದು ನೀರಿನಲ್ಲಿ ತೇಲಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಧಾವಿಸಿದ ಮದ್ದೂರು ಪೊಲೀಸರು ಚೀಲದಿಂದ ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸಿದಾಗ ಮಹಿಳೆಯ ತಲೆ, ಎದೆ ಮತ್ತು ಕೈ ಕಾಲುಗಳಿಗೆ ಕಲ್ಲುಗಳಿಂದ ಕಟ್ಟಿ ಹಾಕಿದ ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ನೀರಿಗೆ ಎಸೆದು ಪರಾರಿಯಾಗಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ , ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶಿವಕುಮಾರ್, ಪಿಎಸ್ಐ ಮಂಜುನಾಥ್ ಹಾಗೂ ಅಪರಾಧ ಪತ್ತೆದಳದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ಮಹಿಳೆಯ ಶವವನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಪ್ರಭಾರ ಪಿಡಿಒ ಲೋಕಾ ಬಲೆಗೆ

  ಕೆ.ಎಂ.ದೊಡ್ಡಿ : ಇ-ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ಕೆ.ಶೆಟ್ಟಿಹಳ್ಳಿ ಗ್ರಾಪಂ ಪ್ರಭಾರ ಪಿಡಿಒ ದಯಾನಂದ ಸೋಮವಾರ ರಾತ್ರಿ ಲೋಕಾಯುಕ್ತ ಬಲೆಗೆ‌ ಬಿದ್ದಿದ್ದಾರೆ.

ಖಾತೆ ಮಾಡಿಕೊಡುವ ಸಂಬಂಧ ಹನುಮಂತನಗರದ ಅಶ್ವಥ್ ಎಂಬುವರಿಂದ 25 ಸಾವಿರ ರು. ಲಂಚ ಕೇಳಿದ್ದಾರೆಂದು ತಿಳಿದುಬಂದಿದೆ. ಅದರಂತೆ ಈಗಾಗಲೇ ‌13 ಸಾವಿರ ರು. ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಸಿಕೊಳ್ಳಲಾಯಿತು. ಇತ್ತ ಅಶ್ವಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇನ್ನು‌ ಸೋಮವಾರ ರಾತ್ರಿ ಹನುಮಂತನಗರದ ರಸ್ತೆ ಬದಿಯೇ ಎಂಟು ಸಾವಿರ ರು. ನಗದು ಪಡೆಯುವ ವೇಳೆ ದಾಳಿ ನಡೆಸಲಾಗಿದೆ. ಲೋಕಯುಕ್ತ ಎಸ್ಪಿ ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಜಯರತ್ನಾ, ಸಿಬ್ಬಂದಿ ಶರತ್, ಶಂಕರ್, ದಿನೇಶ್, ಯೋಗೇಶ್, ನವೀನ, ರಾಮಲಿಂಗು ನೇತೃತ್ವದಲ್ಲಿ ದಾಳಿ ನಡೆಸಿ ಪಿಡಿಒ ದಯಾನಂದ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.‌