ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು

| Published : Sep 16 2025, 02:00 AM IST

ಸಾರಾಂಶ

ಗಣೇಶೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಇಬ್ಬರು ದುಷ್ಕರ್ಮಿಗಳು ಮಚ್ಚು ಬೀಸಿ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗಣೇಶೋತ್ಸವ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಇಬ್ಬರು ದುಷ್ಕರ್ಮಿಗಳು ಮಚ್ಚು ಬೀಸಿ ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೆರೆಹಳ್ಳಿ ಸಮೀಪ ಋಷಿಕೇಶಿ ನಗರದ ಉಷಾ ಹಾಗೂ ವರಲಕ್ಷ್ಮೀ ಹಲ್ಲೆಗೊಳಗಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ವರಲಕ್ಷ್ಮೀ ಅವರ ಕೈ ಬೆರಳು ತುಂಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಸಮೀಪದ ಗಣೇಶೋತ್ಸವದ ನಿಮಿತ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ 9 ಗಂಟೆಯಲ್ಲಿ ವರಲಕ್ಷ್ಮೀ ಹಾಗೂ ಉಷಾ ಮನೆಗೆ ಮರಳುತ್ತಿದ್ದರು. ಅದೇ ವೇಳೆ ಬೈಕ್‌ನಲ್ಲಿ ಬಂದ ಮುಖ ಮುಚ್ಚುವಂತೆ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಗಳು, ಉಷಾ ಅವರ ಕುತ್ತಿಗೆಯಲ್ಲಿದ್ದ ಸರ ಕಿತ್ತು ಬಳಿಕ ವರಲಕ್ಷ್ಮೀ ಅವರ ಕುತ್ತಿಗೆಗೆ ಕೈ ಹಾಕಿದ್ದಾರೆ. ಆಗ ಪ್ರತಿರೋಧ ತೋರಿದಾಗ ಮಹಿಳೆಯರ ಮೇಲೆ ದುಷ್ಕರ್ಮಿಗಳು ಮಚ್ಚು ಬೀಸಿದ್ದಾರೆ. ಈ ಹಂತದಲ್ಲಿ ವರಲಕ್ಷ್ಮೀ ಅವರ ಕೈಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ. ಕೂಡಲೇ ಆರೋಪಿಗಳು ಸರ ಕಿತ್ತು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕದ್ದ ಬೈಕ್ ದುಷ್ಕೃತ್ಯಕ್ಕೆ ಬಳಕೆ:

ಈ ದರೋಡೆ ಕೃತ್ಯಕ್ಕೆ ಆರೋಪಿಗಳು ಕಳವು ಮಾಡಿದ್ದ ಬೈಕ್ ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ದೃಶ್ಯಾವಳಿ ಪರಿಶೀಲಿಸಿದಾಗ ಬೈಕ್‌ ನೊಂದಣಿ ಸಂಖ್ಯೆ ಪತ್ತೆಯಾಯಿತು. ಈ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಕೃತ್ಯಕ್ಕೆ ಬಳಸಿರುವ ಬೈಕ್ ಸಹ ಕಳ್ಳತನದ್ದಾಗಿದೆ ಎಂದು ತಿಳಿದು ಬಂದಿದೆ. ಈ ಸುಳಿವು ಆಧರಿಸಿ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.