ಸಾರಾಂಶ
ತಮ್ಮ ಪತ್ನಿ, ಮಾವನ ಮನೆಯವರ ಕಾಟಕ್ಕೆ ಬೇಸತ್ತು ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಆತ್ಮಹತ್ಯೆ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೆ ಇಂಥದ್ದೇ ಕಾರಣಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಪ್ರಾಣ ತೆತ್ತಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಬೆಂಗಳೂರು : ತಮ್ಮ ಪತ್ನಿ, ಮಾವನ ಮನೆಯವರ ಕಾಟಕ್ಕೆ ಬೇಸತ್ತು ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಆತ್ಮಹತ್ಯೆ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿರುವ ಬೆನ್ನಲ್ಲೆ ಇಂಥದ್ದೇ ಕಾರಣಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಚಲಿಸುವ ರೈಲಿಗೆ ತಲೆಕೊಟ್ಟು ಪ್ರಾಣ ತೆತ್ತಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಹುಳಿಮಾವು ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ತಿಪ್ಪಣ್ಣ ಅಲಗೂರು (33) ಮೃತ ದುರ್ದೈವಿ. ಬೈಯಪ್ಪನಹಳ್ಳಿ ಸಮೀಪ ಚಲಿಸುವ ರೈಲಿಗೆ ಶುಕ್ರವಾರ ರಾತ್ರಿ ತಿಮ್ಮಣ್ಣ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈಲ್ವೆ ಹಳಿಗಳ ಸಮೀಪ ಮೃತದೇಹ ನೋಡಿ ಶನಿವಾರ ಬೆಳಗ್ಗೆ ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಗುರುತು ಪತ್ತೆಯಾಗಿದೆ.
ಇತ್ತೀಚಿಗೆ ಕೌಟುಂಬಿಕ ಕಲಹ ಹಿನ್ನಲೆ ಮಾರತ್ತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಘೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ ವರದಕ್ಷಿಣೆ ದೌರ್ಜನ್ಯ ಕಾಯ್ದೆ ಪರಿಷ್ಕರಣೆಗೆ ಸಾರ್ವಜನಿಕರ ಅಭಿಯಾನ ಶುರುವಾಗಿದೆ. ಈಗ ತಿಪ್ಪಣ್ಣ ಆತ್ಮಹತ್ಯೆ ಮತ್ತಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
2016ರಲ್ಲಿ ಪೊಲೀಸ್ ಇಲಾಖೆಗೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ತಿಪ್ಪಣ್ಣ ಅಲಗೂರು ಸೇರಿದ್ದರು. ನಗರದ ವಿವಿಧ ಠಾಣೆಯಲ್ಲಿ ಕೆಲಸ ಮಾಡಿದ ನಂತರ ಸೇವಾ ಹಿರಿತನ ಆಧಾರದ ಮುಂಬಡ್ತಿ ಪಡೆದ ಅವರು, ಪ್ರಸುತ್ತ ಹುಳಿಮಾವು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 3 ವರ್ಷಗಳಿಂದೆ ಕಲಬುರಗಿ ಜಿಲ್ಲೆ ಯುವತಿ ಜತೆ ಅವರಿಗೆ ವಿವಾಹವಾಗಿತ್ತು. ಮದುವೆ ಬಳಿಕ ನಾಗನಾಥಪುರದ ಕೃಷ್ಣಪ್ಪ ಲೇಔಟ್ ನಲ್ಲಿ ತಿಪ್ಪಣ್ಣ ದಂಪತಿ ನೆಲೆಸಿದ್ದರು. ಆದರೆ ವಿವಾಹವಾದ 3 ದಿನಕ್ಕೆ ಸತಿ-ಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಈ ಭಿನ್ನಾಭಿಪ್ರಾಯ ಹಿನ್ನಲೆ ಪತಿ ಮನೆ ತೊರೆದು ತಿಪ್ಪಣ್ಣ ಪತ್ನಿ ತವರು ಮನೆಗೆ ಮರಳಿದ್ದರು. ಇದೇ ವಿಚಾರವಾಗಿ ತಿಪ್ಪಣ್ಣ ಹಾಗೂ ಅವರ ಮಾವನ ಕುಟುಂಬ ಮಧ್ಯೆ ಜಗಳ ಸಹ ಆಗಿತ್ತು ಎಂದು ಮೂಲಗಳು ಹೇಳಿವೆ.
ವಾರದ ಹಿಂದೆ ಕೌನ್ಸಿಲಿಂಗ್:
ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದು ತಿಪ್ಪಣ್ಣನನ್ನು ಅವರ ಮಾವ ಯಮುನಪ್ಪ ಹಾಗೂ ಸಂಬಂಧಿಕರು ಭೇಟಿಯಾಗಿದ್ದರು. ಆ ವೇಳೆ ತಮ್ಮ ಮಗಳನ್ನು ಕರೆಸಿಕೊಂಡು ಸಂಸಾರ ನಡೆಸುವಂತೆ ಆತನಿಗೆ ತಾಕೀತು ಮಾಡಿದ್ದರು. ಆನಂತರ ವಾರದ ಹಿಂದಷ್ಟೇ ನಗರ ಪೊಲೀಸ್ ಆಯುಕ್ತರ ಕಚೇರಿಯ ಮಹಿಳಾ ಸಹಾಯವಾಣಿ ಕೇಂದ್ರಕ್ಕೂ ತಿಪ್ಪಣ್ಣನ ಮೇಲೆ ದೂರು ಸಲ್ಲಿಕೆಯಾಗಿತ್ತು. ಆಗ ಸಹಾಯವಾಣಿ ಕೇಂದ್ರ ಸಂದರ್ಶಕರು, ತಿಪ್ಪಣ್ಣ ಹಾಗೂ ಆತನ ಪತ್ನಿಯನ್ನು ಕರೆಸಿ ಕೌನ್ಸಿಲಿಂಗ್ ಕೂಡ ಮಾಡಿದ್ದರು. ಈ ಒತ್ತಡಕ್ಕೆ ಮಣಿದು ಮನೆಗೆ ಪತ್ನಿಯನ್ನು ತಿಪ್ಪಣ್ಣ ಕರೆದೊಯ್ದಿದ್ದರು ಎನ್ನಲಾಗಿದೆ.
ಕೆಲಸ ಮುಗಿಸಿ ಬಳಿಕ ಆತ್ಮಹತ್ಯೆ:
ಠಾಣೆಯಲ್ಲಿ ಶುಕ್ರವಾರ ಎರಡನೇ ಪಾಳಿಯದಲ್ಲಿ ಕಾರ್ಯನಿರ್ವಹಿಸಿ ತಿಪ್ಪಣ್ಣ ಮನೆಗೆ ತೆರಳಿದ್ದರು. ಆದರೆ ಮನೆಗೆ ಹೋಗದೆ ಸೀದಾ ಹುಸ್ಕೂರು ಗೇಟ್ ಸಮೀಪ ರಾತ್ರಿ ಚಲಿಸುವ ರೈಲಿಗೆ ತಲೆಕೊಟ್ಟು ಅವರು ಆತ್ಮಹತ್ಯೆ ಶರಣಾಗಿದ್ದಾರೆ. ಠಾಣೆಗೆ ಶನಿವಾರ ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತಿಪ್ಪಣ್ಣ ಹಾಜರಾಗಬೇಕಿತ್ತು. ಆದರೆ 10 ಗಂಟೆಯಾದರೂ ಅವರು ಪತ್ತೆಯಾಗದ ಕಾರಣಕ್ಕೆ ತಿಪ್ಪಣ್ಣನವರನ್ನು ಹುಳಿಮಾವು ಠಾಣೆ ಸಹೋದ್ಯೋಗಿಗಳು ಸಂಪರ್ಕಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಹುಳಿಮಾವು ಠಾಣೆಗೆ ರೈಲ್ವೆ ಪೊಲೀಸರು ಕರೆ ಮಾಡಿ ವಿಚಾರಿಸಿದಾಗ ಆತ್ಮಹತ್ಯೆ ಘಟನೆ ಗೊತ್ತಾಗಿದೆ.
ಪತ್ನಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ
ಮೃತನ ಪ್ಯಾಂಟ್ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಇದರಲ್ಲಿ ನನ್ನ ಪತ್ನಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಡಿ.12 ರಂದು ನನಗೆ ಕರೆ ಮಾಡಿದ್ದ ನನ್ನ ಮಾವ (ಪತ್ನಿ ತಂದೆ) ಯುಮುನಪ್ಪನವರು ಜೀವ ಬೆದರಿಕೆ ಹಾಕಿದ್ದರು. ನೀನು ಸತ್ತು ಹೋಗು, ನನ್ನ ಮಗಳು ಚೆನ್ನಾಗಿರುತ್ತಾಳೆ ಎಂದು ಅವಾಚ್ಯ ಶಬ್ಧಗಳಿಂದ ಮಾವನ ನಿಂದಿಸಿದರು. ಇದರಿಂದ ಬೇಸತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಪ್ಪಣ್ಣ ಬರೆದಿದ್ದಾರೆ.
ಖಾಸಗಿ ಸಂಗತಿ ಹೇಳದೆ ಆತ್ಮಹತ್ಯೆ
ಮದುವೆ ಬಳಿಕ ತೀರಾ ಖಾಸಗಿ ವಿಚಾರವಾಗಿ ತಿಪ್ಪಣ್ಣ ಮನನೊಂದಿದ್ದರು. ಈ ಸಂಗತಿಯನ್ನು ಯಾರೊಂದಿಗೂ ಅವರು ಹೇಳಿಕೊಂಡಿರಲಿಲ್ಲ. ಅಲ್ಲದೆ ಆತ್ಮಹತ್ಯೆ ಟೆಂಡೆನ್ಸಿ ಸಹ ಅವರಲ್ಲಿ ಕಾಣುತ್ತಿತ್ತು. ಹೀಗಾಗಿ ಕೆಲಸದ ವೇಳೆ ಆತನೊಂದಿಗೆ ಯಾರಾದರೂ ಒಬ್ಬರು ಜೊತೆಯಲ್ಲಿರುತ್ತಿದ್ದರು. ಸದಾ ಅಂರ್ತಮುಖಿಯಾಗಿರುತ್ತಿದ್ದ ತಿಪ್ಪಣ್ಣ, ತನ್ನೊಳಗಿನ ತುಮುಲವನ್ನು ಮತ್ತೊಬ್ಬರಿಗೆ ಹೇಳುತ್ತಿರಲಿಲ್ಲ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಕೌಟುಂಬಿಕ ಕಲಹ ವಿಚಾರವಾಗಿ ಕೌನ್ಸಿಂಗ್ ನಡೆದಾಗ ಖಾಸಗಿ ವಿಚಾರವನ್ನು ತಿಪ್ಪಣ್ಣ ಹೇಳಿದ್ದರು. ಅಲ್ಲದೆ ಲಿಖಿತವಾಗಿ ಸಹ ಬರೆದುಕೊಟ್ಟಿದ್ದರು. ಆದರೆ ಈ ವಿಷಯವನ್ನು ತನ್ನ ಕುಟುಂಬ ಅಥವಾ ಮಾವನ ಕುಟುಂಬದವರಿಗೆ ತಿಪ್ಪಣ್ಣ ತಿಳಿಸದೆ ಗೌಪ್ಯವಾಗಿಟ್ಟಿದ್ದು ಆತ್ಮಹತ್ಯೆಗೆ ಮೂಲ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತನ ಪತ್ನಿ, ಪೋಷಕರ ವಿರುದ್ಧ ಕೇಸ್:ಹೆಡ್ ಕಾನ್‌ಸ್ಟೇಬಲ್ ತಿಮ್ಮಪ್ಪಣ್ಣ ಆತ್ಮಹತ್ಯೆ ಸಂಬಂಧ ಮೃತನ ಪತ್ನಿ ಹಾಗೂ ಪೋಷಕರ ವಿರುದ್ಧ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಮಗನ ಸಾವಿಗೆ ಸೊಸೆ ಹಾಗೂ ಅವರು ಪೋಷಕರು ಕಾರಣರಾಗಿದ್ದಾರೆ ಎಂದು ಮೃತನ ಹೆಡ್ ಕಾನ್‌ಸ್ಟೇಬಲ್ ತಾಯಿ ಬಸಮ್ಮ ದೂರು ನೀಡಿದರು. ಅದರನ್ವಯ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಮೃತನ ಪತ್ನಿ ಪಾರ್ವತಿ, ತಂದೆ ಯಮನಪ್ಪ ಹಾಗೂ ಬಾಮೈದ ಮಲ್ಲಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.