ಕಕ್ಷಿದಾರಳನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸೆರೆ

| Published : May 11 2024, 01:33 AM IST / Updated: May 11 2024, 05:07 AM IST

Court
ಕಕ್ಷಿದಾರಳನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕರಣವೊಂದರ ಕೋರ್ಟ್‌ ಆದೇಶವನ್ನು ಪಡೆಯಲು ಬಂದಿದ್ದ ಕಕ್ಷಿದಾರಳನ್ನು ಲಾಡ್ಜ್‌ಗೆ ಕರೆದ ಪಬ್ಲಿಕ್‌ ಪ್ರಾಸಿಕ್ಯೂಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಪ್ರಕರಣವೊಂದರ ಆದೇಶದ ಪ್ರತಿ ಕೇಳಲು ತೆರಳಿದ್ದ ಮಹಿಳೆಯನ್ನು ಬಲವಂತವಾಗಿ ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪದಡಿ ಸರ್ಕಾರಿ ಅಭಿಯೋಜಕನನ್ನು (ಪಬ್ಲಿಕ್‌ ಪ್ರಾಸಿಕ್ಯೂಟರ್‌) ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಮ್‌ ಬಂಧಿತ ಸರ್ಕಾರಿ ಅಭಿಯೋಜಕ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಲೈಂಗಿಕ ಕ್ರಿಯೆಗೆ ಒತ್ತಾಯ, ಬಲವಂತವಾಗಿ ಕರೆದೊಯ್ದ ಆರೋಪದಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ?:

ಸಂತ್ರಸ್ತೆ ನೀಡಿದ ದೂರಿನ ಅನ್ವಯ ‘ಪ್ರಕರಣವೊಂದರಲ್ಲಿ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿತ್ತು. ಈ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಆ ಜಾಮೀನು ಆದೇಶದ ಪ್ರತಿ ಪಡೆಯಲು ಗುರುವಾರ ಮಧ್ಯಾಹ್ನ ಸುಮಾರು 2.30ಕ್ಕೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶ್ರೀರಾಮ್‌ ಅವರನ್ನು ಕಚೇರಿಯಲ್ಲಿ ಭೇಟಿಯಾಗಿದ್ದೆ. ಈ ವೇಳೆ ಶ್ರೀರಾಮ್‌, ‘ನಾವು ಇದರಲ್ಲಿ ಮೇಲು ನೋಟಕ್ಕೆ ಏನೂ ಮಾಡಲು ಬರುವುದಿಲ್ಲ. ನನಗೆ ಪರಿಚಯವಿರುವ ವಕೀಲ ಚಂದನ್‌ ಅವರನ್ನು ಪರಿಚಯ ಮಾಡಿಸುತ್ತೇನೆ. ಶುಲ್ಕದ ಬಗ್ಗೆ ಮಾತನಾಡೋಣ. ನ್ಯಾಯಾಲಯದ ಗೇಟ್‌ ಬಳಿ ಕಾಯಿರಿ ನಾನು ಬರುತ್ತೇನೆ ಎಂದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ನ್ಯಾಯಾಲಯದ ಗೇಟ್‌ ಬಳಿ ಬಂದ ಶ್ರೀರಾಮ್, ಆಟೋದಲ್ಲಿ ಕುಳಿತುಕೊಂಡರು. ನನ್ನನ್ನೂ ಕುಳಿತುಕೊಳ್ಳುವಂತೆ ಕರೆದರು. ಶುಲ್ಕದ ಬಗ್ಗೆ ಮಾತನಾಡೋಣ ಎಂದರು. ನಂತರ ನಾನು ಆಟೋ ಬಳಿ ಹೋದಾಗ ಬಾ ಕೂರು ಎಂದು ಕರೆದರು. ಅದರಂತೆ ನಾನು ಆಟೋದಲ್ಲಿ ಕುಳಿತು ಮಾತನಾಡಲು ಮುಂದಾದಾಗ ಆಟೋವನ್ನು ಕಾಟನ್‌ಪೇಟೆ ರಸ್ತೆಯ ಲಾಡ್ಜ್‌ ಹತ್ತಿರ ನಿಲ್ಲಿಸಿದರು.’

ರೂಮ್‌ ಒಳಗೆ ಬಾ ಎಂದು ಬಲವಂತ:

ಮುಂದುವರೆದು ‘ನಂತರ ಒಳಗೆ ಬಾ ಎಂದರು. ನಾನು ಬರುವುದಿಲ್ಲ ಎಂದೆ. ಆಗ ನಿಂದು ಏನಿದೆ? ಎಲ್ಲಾ ರೀತಿ ಸಮಸ್ಯೆಯನ್ನು ಬಗೆಹರಿಸುತ್ತೇನೆ. ರೂಮ್‌ ಒಳಗೆ ಬಾ ಎಂದರು. ನನಗೆ ಇದೆಲ್ಲಾ ಇಷ್ಟವಿಲ್ಲ. ಬಲವಂತ ಮಾಡಬೇಡಿ ಎಂದೆ. ನಂತರ ಅವರು ಬಿಡದೆ, ಒಳಗೆ ಬಾ ಎಂದು ಕೈ ಹಿಡಿದು ಎಳೆದರು. ನಾನು ಅಂತಹ ಹುಡುಗಿಯಲ್ಲ. ನಾನು ನನ್ನ ಗಂಡನಿಗೆ ಮೋಸ ಮಾಡುವುದಿಲ್ಲ ಎಂದು ಎಷ್ಟು ಹೇಳಿದರೂ ಅವರು ಬಲವಂತ ಮಾಡಿದರು. ನೀನು ಅಂತವಳಲ್ಲ ಎಂದು ನನಗೂ ಗೊತ್ತು. ನಾನೂ ಅಂತವನಲ್ಲ. ಕೆಲಸ ಆಗಬೇಕು ಎಂದರೆ ಇದೆಲ್ಲಾ ಮಾಡಬೇಕು. ಯೋಚನೆ ಮಾಡು. ನಾನು ರೂಮ್‌ ಒಳಗೆ ಇರುತ್ತೇನೆ. ಒಳಗೆ ಬಾ ಎಂದು ಕರೆದರು’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

10 ನಿಮಿಷ ಲೈಂಗಿಕ ಸುಖ ಕೊಡು ಎಂದರು:

‘ನಾನು ಒಳಗೆ ಹೋಗದೆ ಮುಂದೆ ಬಂದು ಹೋಟೆಲ್‌ವೊಂದರ ಎದುರು ನಿಂತೆ. ಬಳಿಕ ನನ್ನ ಗಂಡನಿಗೆ ಘಟನೆಯನ್ನು ತಿಳಿಸಿ ಹೋಟೆಲ್‌ ಒಳಗೆ ಕುಳಿತೆ. ಅಲ್ಲಿಗೂ ಬಂದ ಶ್ರೀರಾಮ್‌, ಬಲವಂತ ಮಾಡಿದರು. ಇಲ್ಲಿ ಬೇಡ ಬೇರೆ ಕಡೆ ರೂಮ್‌ ಮಾಡುತ್ತೇನೆ ಎಂದರು. ನನ್ನೊಂದಿಗೆ ಅನ್ಯೂನ್ಯವಾಗಿರು. 10 ನಿಮಿಷ ಲೈಂಗಿಕ ಸುಖ ನೀಡು ಸಾಕು. ನಿನಗೆ ಸಹಾಯ ಮಾಡುತ್ತೇನೆ ಎಂದರು. ಇದೇ ರೀತಿ ಹೇಳುತ್ತಾ ಹಿಂಸೆ ನೀಡಿ ಬಾ ಎಂದು ಬಲವಂತ ಮಾಡುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು

‘ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಗಂಡನ ಸ್ನೇಹಿತ ಅಮ್ಸುದ್‌, ಶ್ರೀರಾಮ್‌ನು ನನ್ನನ್ನು ಬಲವಂತ ಮಾಡುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ಬಳಿಕ ಅವರು ಪ್ರಶ್ನೆ ಮಾಡಿದಾಗ ಶ್ರೀರಾಮ್‌ ಅಲ್ಲಿಂದ ಓಡಿ ಹೋದರು. ಬಳಿಕ ಅಲ್ಲಿದ್ದ ಸಾರ್ವಜನಿಕರು ಶ್ರಿರಾಮ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆಗ ಶ್ರೀರಾಮ್‌, ನಿನ್ನನ್ನು ಬಿಡುವುದಿಲ್ಲ. ಸಾಯಿಸುತ್ತೇನೆ. ಮೊಬೈಲ್‌ನಲ್ಲಿರುವ ವಿಡಿಯೋವನ್ನು ಡಿಲೀಟ್‌ ಮಾಡು ಎಂದು ಬೆದರಿಕೆ ಹಾಕಿದರು’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಸಂತ್ರಸ್ತೆಯು ನೀಡಿದ ದೂರಿನಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಇದರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ಹೇಳಿಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಚಿತ್ರ: ಆರೋಪಿ ಶ್ರೀರಾಮ್‌