ಸಾರಾಂಶ
ಕೊಟ್ಟಿಗೆಹಾರ (ಚಿಕ್ಕಮಗಳೂರು) : ಪಿತೃಪಕ್ಷದ ಬಾಡೂಟಕ್ಕೆ ರಾತ್ರಿ ವೇಳೆ ಮಾವನ ಮನೆಗೆ ತೆರಳಲು ಅಳಿಯನೊಬ್ಬ 112 ಪೊಲೀಸರಿಗೆ ಕರೆ ಮಾಡಿ ಜೀಪನ್ನು ಕರೆಸಿಕೊಂಡ ಘಟನೆ ಗುರುವಾರ ರಾತ್ರಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.
ತರುವೆ ಗ್ರಾಮದ ಅಶೋಕ್, ಪಲ್ಗುಣಿ ಗ್ರಾಮದ ತನ್ನ ಮಾವನ ಮನೆಗೆ ಮಹಾಲಯ ಅಮಾವಾಸ್ಯೆಯ ಬಾಡೂಟಕ್ಕೆ ಹೋಗಬೇಕಿತ್ತು. ರಾತ್ರಿ ಕೊಟ್ಟಿಗೆಹಾರ ಸುತ್ತಮುತ್ತ ಮಳೆಯಿದ್ದ ಕಾರಣ, ಪಲ್ಗುಣಿ ಗ್ರಾಮಕ್ಕೆ ಹೋಗಲು ಯಾವ ವಾಹನಗಳು ಸಿಗಲಿಲ್ಲ. ಅದಕ್ಕಾಗಿ ಆತ 112 ಪೊಲೀಸ್‌ಗೆ ಕೆರೆ ಮಾಡಿ ‘ಸರ್, ಮನೆಯಲ್ಲಿ ತುಂಬಾ ಗಲಾಟೆ ಆಗ್ತಾ ಇದೆ ಬನ್ನಿ’ ಎಂದು ಕೊಟ್ಟಿಗೆಹಾರಕ್ಕೆ ಕರೆಸಿಕೊಂಡಿದ್ದಾನೆ.
ಸ್ಥಳಕ್ಕೆ ಬಂದ ಪೊಲೀಸರು ‘ಎಲ್ಲಿ ಗಲಾಟೆ ನಡಿ ಮನೆಗೆ ಹೋಗೋಣ’ ಎಂದಾಗ, ‘ಸರ್ ಯಾವ ಗಲಾಟೆಯೂ ಇಲ್ಲ. ನಾನು ಪಲ್ಗುಣಿ ಗ್ರಾಮದಲ್ಲಿರುವ ನನ್ನ ಮಾವನ ಮನೆಗೆ ಪಿತೃಪಕ್ಷದ ಊಟಕ್ಕೆ ಹೋಗಬೇಕಿತ್ತು. ಅದಕ್ಕಾಗಿ ನಿಮಗೆ ಕರೆ ಮಾಡಿದೆ. ನನ್ನನ್ನು ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡಿ ಸರ್’ ಎಂದು ಕೇಳಿದ್ದಾನೆ.
ಬಳಿಕ ಪೊಲೀಸರು ಆತನಿಗೆ ‘ಪೊಲೀಸ್ ಜೀಪ್ ಇರೋದು ಸಮಾಜದ ಕೆಲಸ, ಸರ್ಕಾರದ ಕೆಲಸ ಮಾಡೋದಕ್ಕೆ ಕಣಪ್ಪಾ. ನಿನ್ನನ್ನು ಮಾವನ ಮನೆಗೆ ಕರ್ಕೊಂಡು ಹೋಗಕ್ಕಲ್ಲ. ಇನ್ನೊಮ್ಮೆ ಹೀಗೆ ಮಾಡಬೇಡ’ ಎಂದು ಬುದ್ಧಿ ಹೇಳಿ ಪೊಲೀಸರೇ ಲಾರಿಯನ್ನು ನಿಲ್ಲಿಸಿ ಆತನನ್ನ ಪಲ್ಗುಣಿ ಗ್ರಾಮದ ಮಾವನ ಮನೆಗೆ ಕಳುಹಿಸಿದ್ದಾರೆ.