ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಡಿದ್ದ ಸಾಲ ತೀರಿಸಲು ತಾನು ಕೆಲಸಕ್ಕಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ನೌಕರರನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್ (29) ಬಂಧಿತ. ಆರೋಪಿಯಿಂದ ₹22 ಲಕ್ಷ ಮೌಲ್ಯದ 55 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ವೈಟ್‌ಫೀಲ್ಡ್‌ನ ಐಟಿಪಿಎಲ್‌ನ ಟೆಲಿಕಾಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಒಂದೊಂದೇ ಲ್ಯಾಪ್‌ಟಾಪ್‌ಗಳು ಕಳುವಾಗುತ್ತಿದ್ದವು. ಈ ಸಂಬಂಧ ಕಂಪನಿ ಮಾಲೀಕ ಅತುಲ್ ಹ್ಯಾಲೆವ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳೆ ನಷ್ಟದಿಂದ ಸಾಲ ಹೆಚ್ಚಳ:ಆರೋಪಿ ಮುರುಗೇಶ್ ಬಿಸಿಎ ಪದವಿಧರನಾಗಿದ್ದು, ಕಳೆದ ಫೆಬ್ರವರಿಯಲ್ಲಿ ಐಟಿಪಿಎಲ್‌ನ ಟೆಲಿಕಾಲರ್ ಕಂಪನಿಗೆ ಕೆಲಸಕ್ಕೆ ಸೇರಿದ್ದ. ಸ್ವಂತ ಊರಿನಲ್ಲಿ ಟೊಮೆಟೋ ಬೆಳೆದು ₹25 ಲಕ್ಷ ನಷ್ಟ ಅನುಭವಿಸಿದ್ದ. ಪರಿಚಿತರು, ಸ್ನೇಹಿತರ ಬಳಿ ಕೈಸಾಲ ಮಾಡಿಕೊಂಡು ಬಡ್ಡಿ ಪಾವತಿಸಲಾಗದೆ ಕಷ್ಟಪಡುತ್ತಿದ್ದ. ಹೀಗಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ದಿನಕ್ಕೊಂದು ಲ್ಯಾಪ್‌ಟಾಪ್ ಕಳವು ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಲ್ಯಾಪ್‌ಟಾಪ್ ಮಾರಿ ಬಡ್ಡಿ ತೀರಿಸಿದ ಕಳ್ಳಆರೋಪಿಯು ಕದ್ದ ಲ್ಯಾಪ್‌ಟಾಪನ್ನು ಹೊಸೂರಿನ ಹಳೆಯ ಲ್ಯಾಪ್‌ಟಾಪ್ ರಿಪೇರಿ ಮತ್ತು ಮಾರಾಟ ಮಳಿಗೆಗೆ ಮಾರಾಟ ಮಾಡುತ್ತಿದ್ದ. ಅಂಗಡಿ ಮಾಲೀಕ ಬಿಲ್ ಕೇಳಿದಾಗ ತಂದು ಕೊಡುವುದಾಗಿ ಹೇಳಿ ಪ್ರತಿ ಲ್ಯಾಪ್‌ಟಾಪ್‌ಗೆ ₹15-18 ಸಾವಿರ ಪಡೆಯುತ್ತಿದ್ದ. ಕಂಪನಿಯಲ್ಲಿ ಕಳವು ಮಾಡಿದ್ದ 45 ಲ್ಯಾಪ್‌ಟಾಪ್ ಮಾರಾಟ ಮಾಡಿ ಬಂದ ಹಣದಿಂದ ಸಾಲದ ಬಡ್ಡಿ ಪಾವತಿ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.