ಪಿಜಿಗಳಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ ಎಗರಿಸುತ್ತಿದ್ದ ಟೆಕಿ ಪೊಲೀಸರ ಬಲೆಗೆ

| Published : Nov 06 2024, 01:16 AM IST

ಪಿಜಿಗಳಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ ಎಗರಿಸುತ್ತಿದ್ದ ಟೆಕಿ ಪೊಲೀಸರ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳ ನೆಲೆಸಿರುವ ಪಿಜಿಗಳನ್ನೇ ಗುರಿಯಾಗಿಸಿ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್ ದೋಚುತ್ತಿದ್ದ ಕಿಡಿಗೇಡಿಯೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳ ನೆಲೆಸಿರುವ ಪಿಜಿಗಳನ್ನೇ ಗುರಿಯಾಗಿಸಿ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್ ದೋಚುತ್ತಿದ್ದ ಕಿಡಿಗೇಡಿಯೊಬ್ಬನನ್ನು ಬೆಳ್ಳಂದೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ನವೀನ್‌ ರೆಡ್ಡಿ ಬಂಧಿತನಾಗಿದ್ದು, ಆರೋಪಿಯಿಂದ 16 ಲ್ಯಾಪ್‌ಟಾಪ್‌ ಹಾಗೂ 4 ಮೊಬೈಲ್‌ಗಳು ಸೇರಿದಂತೆ ₹10 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಭೋಗನಹಳ್ಳಿ ಸಮೀಪ ಪಿಜಿಯಲ್ಲಿ ಮುಂಜಾನೆ ಲ್ಯಾಪ್‌ಟಾಪ್ ಕಳವು ಮಾಡಿ ರೆಡ್ಡಿ ಹೊರ ಬಂದಿದ್ದಾನೆ. ಅದೇ ವೇಳೆ ಆ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಬೆಳ್ಳಂದೂರು ಠಾಣೆ ಪೊಲೀಸರ ಕಣ್ಣಿಗೆ ಆತ ಬಿದ್ದಿದ್ದಾನೆ. ಆಗ ಶಂಕೆ ಮೇರೆಗೆ ರೆಡ್ಡಿನನ್ನು ವಶಕ್ಕೆ ಪಡೆದು ಗಸ್ತು ಸಿಬ್ಬಂದಿ ವಿಚಾರಿಸಿದಾಗ ಕಳ್ಳತನ ಕೃತ್ಯ ಬಯಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಸಿಎ ಪದವೀಧರನಾದ ಕಳ್ಳ: ಆರೋಪಿ ನವೀನ್ ರೆಡ್ಡಿ ಬಿಸಿಎ ಪದವೀಧರನಾಗಿದ್ದು, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿದ್ದ. ಆದರೆ ನಿರಾಯಾಸವಾಗಿ ಹಣ ಸಂಪಾದನೆಗೆ ಆತ ಕಳ್ಳತನಕ್ಕಿಳಿದಿದ್ದ. ಅಂತೆಯೇ ಎರಡು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ರೆಡ್ಡಿ, ಕೆ.ಆರ್‌.ಪುರ ಸಮೀಪ ಪಿಜಿಯಲ್ಲಿ ನೆಲೆಸಿದ್ದ. ಹಗಲು ಹೊತ್ತಿನಲ್ಲಿ ಪಿಜಿಗಳನ್ನು ಗುರುತಿಸಿ ಆತ ರಾತ್ರಿ ವೇಳೆ ಪೀಜಿಗೆ ನುಗ್ಗಿ ಲ್ಯಾಪ್‌ಟಾಪ್‌ ಲಪಟಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಐಟಿ ಉದ್ಯೋಗಿಗಳು ನಸುಕಿನ ಹೊತ್ತಿನಲ್ಲಿ ಪಿಜಿಗಳಿಗೆ ಮರಳುತ್ತಿದ್ದರು. ಆಗ ನಿದ್ರೆ ಮಂಪರಿನಲ್ಲಿ ಕೊಠಡಿಗಳು ಸರಿಯಾಗಿ ಬಾಗಿಲು ಬಂದ್ ಮಾಡದೆ ಅವರು ನಿದ್ರೆ ಜಾರುತ್ತಿದ್ದರು. ಆ ಸಮಯವನ್ನು ನೋಡಿಕೊಂಡು ಪಿಜಿಗಳಿಗೆ ಆತ ನುಗ್ಗುತ್ತಿದ್ದ. ಈಗ ಬಂಧನದಿಂದ ಬೆಳ್ಳಂದೂರು ಹಾಗೂ ಬಂಡೇಪಾಳ್ಯ ಠಾಣೆಗಳ ಸರಹದ್ದಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿಸಿದ ಗಸ್ತು ವ್ಯವಸ್ಥೆ: ಪಿಜಿಗಳಲ್ಲಿ ಕಳ್ಳತನ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳ ಕಡಿವಾಣ ಹಾಕುವ ಸಲುವಾಗಿ ಮಾರತ್ತಹಳ್ಳಿ ಉಪ ವಿಭಾಗದ ವ್ಯಾಪ್ತಿಯ ಪಿಜಿಗಳಿಗೆ ರಾತ್ರಿ 12ರಿಂದ ಬೆಳಗ್ಗೆ 7ರವೆರೆಗೆ ವಿಶೇಷ ಗಸ್ತು ವ್ಯವಸ್ಥೆಯನ್ನು ಎಸಿಪಿ ಡಾ। ಪ್ರಿಯದರ್ಶಿನಿ ಈಶ್ವರ ಸಾಣೆಕೊಪ್ಪ ಜಾರಿಗೊಳಿಸಿದ್ದಾರೆ.

ಎಸಿಪಿ ಅವರ ಆದೇಶ ಹಿನ್ನೆಲೆಯಲ್ಲಿ ಪ್ರತಿ ದಿನ ಪಿಜಿಗಳ ರಸ್ತೆಯಲ್ಲಿ ಆ ಉಪ ವಿಭಾಗದ ಪ್ರತಿ ಠಾಣೆಯಲ್ಲಿ ಓರ್ವ ಎಎಸ್‌ಐ ಸೇರಿ ಮೂವರು ಸಿಬ್ಬಂದಿ ಗಸ್ತು ನಡೆಸುತ್ತಿದ್ದಾರೆ. ಹೀಗಿರುವಾಗ ಅ.29ರಂದು ಭೋಗನಹಳ್ಳಿ ಪಿಜಿಗೆ ಕನ್ನ ಹಾಕಿ ಲ್ಯಾಪ್‌ಟಾಪ್‌ ಹಾಗೂ ಮೊಬೈಲ್ ದೋಚಿ ನವೀನ್ ರೆಡ್ಡಿ ಹೊರ ಬಂದಿದ್ದ. ಅದೇ ವೇಳೆ ಗಸ್ತಿನಲ್ಲಿ ಸಿಬ್ಬಂದಿ, ಪಿಜಿಯಿಂದ ಹೊರಬಂದ ರೆಡ್ಡಿ ನಡವಳಿ ಮೇಲೆ ಶಂಕೆ ಮೂಡಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.