ಆಟೋ ರಿಕ್ಷಾ ಕದಿಯುವಾಗ ಮಾಲಿಕನಿಗೆ ಸಿಕ್ಕಿಬಿದ್ದ ಕಳ್ಳ

| Published : Mar 22 2024, 02:19 AM IST

ಸಾರಾಂಶ

ರಸ್ತೆ ಬದಿ ನಿಲ್ಲಿಸಿದ್ದ ಆಟೋವನ್ನು ಕದಿಯುವಾಗ ಕಳ್ಳನೊಬ್ಬ ಆಟೋ ಮಾಲಿಕನಿಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹ್ಯಾಂಡಲ್‌ ಲಾಕ್‌ ಮುರಿದು ಪ್ಯಾಸೆಂಜರ್‌ ಆಟೋ ರಿಕ್ಷಾ ಕಳವು ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುತ್ತಲು ಮಂಡ್ಯ ಸಾದತ್‌ನಗರದ ನಿವಾಸಿ ನಿಯಾಮತ್‌ ಖಾನ್‌(28) ಬಂಧಿತ. ಆರೋಪಿಯಿಂದ ₹12 ಲಕ್ಷ ಮೌಲ್ಯದ 7 ಆಟೋರಿಕ್ಷಾ ಜಪ್ತಿ ಮಾಡಲಾಗಿದೆ. ಮಾ.18ರಂದು ಸುಹೇಲ್‌ ಅಹಮದ್‌ ಎಂಬುವವರು ಬೆಳಗ್ಗೆ ಮೈಸೂರು ರಸ್ತೆ ಟೋಲ್‌ಗೇಟ್‌ ಬಸ್‌ ನಿಲ್ದಾಣದ ಬಳಿ ಆಟೋರಿಕ್ಷಾ ನಿಲ್ಲಿಸಿದ್ದರು. ಈ ವೇಳೆ ಆರೋಪಿಯು ಹ್ಯಾಂಡಲ್‌ ಲಾಕ್‌ ಮುರಿದು ಆ ಆಟೋ ರಿಕ್ಷಾ ಕಳವು ಮಾಡಲು ಪ್ರಯತ್ನಿಸುತ್ತಿರುವಾಗ ಸುಹೇಲ್‌ ಅಹಮದ್‌ಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ. ಬಳಿಕ ಆತನನ್ನು ಚಾಮರಾಜಪೇಟೆ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿತ್ತು.

ಆರೋಪಿ ನಿಯಾಮತ್‌ ಖಾನ್‌ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಹಲವು ಬಾರಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಗೆ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ರಫೀಕ್‌ ಅಲಿಯಾಸ್‌ ಗೋರು ಎಂಬಾತನ ಜತೆಗೆ ಸೇರಿಕೊಂಡು ಅಪರಾಧ ಕೃತ್ಯಗಳನ್ನು ಎಸೆಗುತ್ತಿದ್ದ. ಬಸ್‌ ನಿಲ್ದಾಣಗಳು, ಆಟೋ ನಿಲ್ದಾಣಗಳು, ಮನೆ ಎದುರು ನಿಲುಗಡೆ ಮಾಡಿದ ಆಟೋರಿಕ್ಷಾಗಳನ್ನು ಗುರಿಯಾಗಿಸಿ ಹ್ಯಾಂಡಲ್‌ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ಕದ್ದ ಆಟೋ ರಿಕ್ಷಾವನ್ನು ಪರಿಚಿತರ ಮುಖಾಂತರ ಮಾರಾಟ ಮಾಡಿಸಿ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು.

ಆರೋಪಿ ನಿಯಾಮತ್‌ ಖಾನ್‌ ಬಂಧನದಿಂದ ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ಒಂದು ಆಟೋರಿಕ್ಷಾ ಪತ್ತೆಯಾಗಿದೆ. ಉಳಿದ ಆರು ರಿಕ್ಷಾಗಳ ವಾರಸುದಾರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ಆರೋಪಿ ರಫೀಕ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬೀಸಲಾಗಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.