ಸಾರಾಂಶ
ಬೆಂಗಳೂರು : ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಣ್ಣೂರು ನಿವಾಸಿ ಮುದಾಸೀರ್ (22) ಬಂಧಿತ. ಆರೋಪಿಯಿಂದ ₹5 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳು ಹಾಗೂ ಒಂದು ಆಟೋ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಒಳಣ್ಣ ಗಾರ್ಡನ್ ನಿವಾಸಿಯೊಬ್ಬರು ಶಾಂಪುರ ಮುಖ್ಯರಸ್ತೆಯ ಫಂಕ್ಷನ್ ಹಾಲ್ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಆರ್.ಟಿ.ನಗರದ ಕೆ.ಬಿ.ಸಂದ್ರ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದ. ಕದ್ದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದ. ವಿಚಾರಣೆ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಡಿ.ಜೆ.ಹಳ್ಳಿ ರಾಘವೇಂದ್ರಸ್ವಾಮಿ ದೇವಸ್ಥಾನ ಸಮೀಪದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ ಎಂಟು ದ್ವಿಚಕ್ರ ವಾಹನಗಳು ಹಾಗೂ ಆಟೋ ಜಪ್ತಿ ಮಾಡಲಾಗಿದೆ.
ಈತನ ಬಂಧನದಿಂದ ಡಿ.ಜೆ.ಹಳ್ಳಿಯ ಮೂರು ದ್ವಿಚಕ್ರ ವಾಹನ ಹಾಗೂ ಆಟೋ, ಗೋವಿಂದಪುರದ, ಪುಲಕೇಶಿನಗರ, ಭಾರತಿನಗರ, ವಿಶ್ವೇಶ್ವರಪುರ ಹಾಗೂ ಬೇಗೂರು ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು 8 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.