ಕಲ್ಯಾಣ ಮಂಟಪದಲ್ಲಿ ಅತಿಥಿ ಸೋಗಿನಲ್ಲಿ ಕಳ್ಳತನ: ಬಂಧನ

| Published : Jan 25 2024, 02:02 AM IST

ಸಾರಾಂಶ

ಕಲ್ಯಾಣ ಮಂಟಪಗಳಿಗೆ ತೆರಳಿ ಚಿನ್ನ ದೋಚುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲ್ಯಾಣ ಮಂಟಪಗಳಿಗೆ ಅತಿಥಿ ಸೋಗಿನಲ್ಲಿ ತೆರಳಿ ಮಧು-ವರ ಕೊಠಡಿಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮಲಾ ನಗರದ ನಿವಾಸಿ ನಿಖಿಲ್ ಬಂಧಿತನಾಗಿದ್ದು, ಆರೋಪಿಯಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿರುವ ಜಲರಾಂ ಭವನ ಕಲ್ಯಾಣ ಮಂಟಪದಲ್ಲಿ ಅರಕ್ಷತೆ ವೇಳೆ ಜನ ಸಂದಣಿ ಇದ್ದ ಸಮಯದಲ್ಲಿ ಮಧುಮಗಳ ಕೋಣೆಗೆ ತೆರಳಿ 1.81 ಲಕ್ಷ ರು ಮೌಲ್ಯದ 31 ಗ್ರಾಂ ಚಿನ್ನವನ್ನು ನಿಖಿಲ್ ಕಳವು ಮಾಡಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಖಿಲ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಈ ಹಿಂದೆ ಹಾಸನ ರೈಲ್ವೆ ನಿಲ್ದಾಣದಲ್ಲಿ ಚಿನ್ನಾಭರಣ ಕಳವು ಮಾಡಿ ಸಿಕ್ಕಿದ್ದು ಆತ ಜೈಲು ಸೇರಿದ್ದ. ಕೆಲ ದಿನಗಳ ಹಿಂದೆಷ್ಟೇ ಜಾಮೀನು ಪಡೆದು ಆತ ಜೈಲಿನಿಂದ ಹೊರ ಬಂದಿದ್ದ. ಮತ್ತೆ ತನ್ನ ಚಾಳಿ ಮುಂದುವರೆಸಿ ಈಗ ಮತ್ತೊಮ್ಮೆ ಸೆರೆಮನೆಗೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.