ಸಾರಾಂಶ
ಮದ್ದೂರು ತಾಲೂಕಿನ ಅಣ್ಣೂರು ಗ್ರಾಮದ ಬಳಿ ಇರುವ ಮ್ಯಾಗ್ನಸ್ ರೇಡಿಯಂ ಪ್ಲೇವುಡ್ ಕಾರ್ಖಾನೆಯಲ್ಲಿ ₹40 ಲಕ್ಷಕ್ಕೂ ಹೆಚ್ಚು ಮೌಲ್ಯದ ಯಂತ್ರೋಪಕರಣ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ. ಹಾಗೇ ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು ಚಾಲಕ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಛತ್ರ ಲಿಂಗನದೊಡ್ಡಿ ಗ್ರಾಮದ ಬಳಿ ಸೋಮವಾರ ರಾತ್ರಿ ಜರುಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಅಣ್ಣೂರು ಗ್ರಾಮದ ಬಳಿ ಇರುವ ಮ್ಯಾಗ್ನಸ್ ರೇಡಿಯಂ ಪ್ಲೇವುಡ್ ಕಾರ್ಖಾನೆಯಲ್ಲಿ ₹40 ಲಕ್ಷಕ್ಕೂ ಹೆಚ್ಚು ಮೌಲ್ಯದ ಯಂತ್ರೋಪಕರಣ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಚ್ಚಿನ್ ಅಲಿಯಾಸ್ ಚಿದಾನಂದ, ಈತನ ಸಹೋದರ ಸಂಜಯ್, ರಾಜು, ಸಿದ್ದರಾಜು ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು ₹40 ಲಕ್ಷ ರು ವೌಲ್ಯದ ಯಂತ್ರೋಪಕರಣಗಳು, ಕೃತ್ಯಕ್ಕೆ ಬಳಸಿದ 2 ಕ್ಯಾಂಟರ್, 1 ಕಾರು ಹಾಗೂ ಗ್ಯಾಸ್ ಕಟ್ಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಪ್ಲೇವುಡ್ ಕಾರ್ಖಾನೆಯಲ್ಲಿ ಕಳೆದ ಡಿ.20ರಂದು ಆರೋಪಿಗಳು ರಾತ್ರಿ ವೇಳೆ ಬಾಗಿಲನ್ನು ಗ್ಯಾಸ್ ಕಟ್ಟರ್ ಬಳಸಿ ತುಂಡರಿಸಿ ಒಳ ನುಗ್ಗಿ ಕಾರ್ಖಾನೆಯಲ್ಲಿದ್ದ ಯಂತ್ರಗಳನ್ನು ಕದ್ದು ಕ್ಯಾಂಟರ್‌ಗಳಲ್ಲಿ ಸಾಗಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಪಿಸಿ.ಇ. ತಿಮ್ಮಯ್ಯ ಹಾಗೂ ಎಸ್.ಇ. ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್. ಆನಂದ, ಪಿಎಸ್‌ಐ ರಾಮಸ್ವಾಮಿ, ಭೀಮಪ್ಪ ಬಾಣಸಿ ಮತ್ತು ಸಿಬ್ಬಂದಿ ಮಹೇಶ್, ರಾಜೇಂದ್ರ, ನಟರಾಜ, ವಿಠ್ಠಲ, ಸುಬ್ರಮಣಿ, ಅರುಣ್, ವಾಸುದೇವ, ರವಿಕಿರಣ್, ಲೋಕೇಶ್ ಅವರನ್ನೊಳಗೊಂಡ ತಂಡ ಬೆಂಗಳೂರು, ಹಾಸನ ಹಾಗೂ ಆಲೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.ಘಟನೆಗೆ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೇತುವೆಗೆ ಬೈಕ್ ಡಿಕ್ಕಿ; ಹಿಂಬದಿ ಸವಾರ ಸಾವುಮದ್ದೂರು:ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು ಚಾಲಕ ಗಾಯಗೊಂಡಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಛತ್ರ ಲಿಂಗನದೊಡ್ಡಿ ಗ್ರಾಮದ ಬಳಿ ಸೋಮವಾರ ರಾತ್ರಿ ಜರುಗಿದೆ.ತಾಲೂಕಿನ ಆತಗೂರು ಹೋಬಳಿ ಅಡಗನಹಳ್ಳಿ ರವಿ ಪುತ್ರ ಎ.ಆರ್.ಚಂದ್ರ (33) ಅಪಘಾತದಲ್ಲಿ ಮೃತಪಟ್ಟವರು.ಬೈಕ್ ಚಾಲನೆ ಮಾಡುತ್ತಿದ್ದ ಮಲ್ಲನಕುಪ್ಪೆ ಗ್ರಾಮದ ಮಹದೇವ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತ ಚಂದ್ರು ಹಾಗೂ ಮಹದೇವು ರಾತ್ರಿ 9:45 ಸುಮಾರಿಗೆ ಹುಲಿಯೂರುದುರ್ಗ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ತುಮಕೂರು- ಮದ್ದೂರು ರಾಜ್ಯ ಹೆದ್ದಾರಿಯ ಛತ್ರಲಿಂಗನದೊಡ್ಡಿ ಗ್ರಾಮದ ಬಳಿ ಬೈಕು ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿ ಸವಾರ ಚಂದ್ರ ತೀವ್ರವಾಗಿ ಗಾಯಗೊಂಡು ಸೇತುವೆ ಕೆಳಗೆ ಹರಿಯುತ್ತಿದ್ದ ಹೊಳೆನೀರಿಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಕೆಸ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲೆ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ವೆಂಕಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.