ಬೈಕ್‌ ಕದ್ದು ಮಾರುತ್ತಿದ್ದ ಕಳ್ಳನ ಸೆರೆ: 20 ಲಕ್ಷದ 20 ಬೈಕ್‌ ಜಪ್ತಿ

| Published : Apr 05 2024, 01:07 AM IST / Updated: Apr 05 2024, 05:19 AM IST

Best Bikes In india

ಸಾರಾಂಶ

ನಗರದಲ್ಲಿ ವಾಹನ ಕಳ್ಳತನದಲ್ಲಿ ನಿರತನಾಗಿದ್ದ ಕಿಡಿಗೇಡಿಯೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ನಗರದಲ್ಲಿ ವಾಹನ ಕಳ್ಳತನದಲ್ಲಿ ನಿರತನಾಗಿದ್ದ ಕಿಡಿಗೇಡಿಯೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಸಮೀಪದ ನಿಂಗೇಗೌಡನದೊಡ್ಡಿ ನಿವಾಸಿ ರಮೇಶ್ ಬಂಧಿತನಾಗಿದ್ದು, ಆರೋಪಿಯಿಂದ ₹20 ಲಕ್ಷ ಮೌಲ್ಯದ 20 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಾಗದೇವನಹಳ್ಳಿ ಸಮೀಪದ ಉಪಾಧ್ಯಾಯ ಲೇಔಟ್‌ನಲ್ಲಿ ಸಂದೀಪ್‌ ಶೆಟ್ಟಿ ಎಂಬುವರ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಮೇಶ್ ಮೂಲತಃ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯವನಾಗಿದ್ದು, ಬಿಡದಿ ಸಮೀಪ ನಿಂಗೇಗೌಡನದೊಡ್ಡಿಯಲ್ಲಿ ಬಾಡಿಗೆ ಮನೆಯಲ್ಲಿ ಆತ ವಾಸವಾಗಿದ್ದ. ವೃತ್ತಿಪರ ಕಳ್ಳನಾದ ಆತ, ವಾಹನಗಳ್ಳತನಕ್ಕೆ ಕುಖ್ಯಾತನಾಗಿದ್ದ. ಈ ಹಿಂದೆ ವಾಹನ ಕಳ್ಳತನ ಪ್ರಕರಣದಲ್ಲಿ ರಮೇಶ್ ಜೈಲೂಟ ಕೂಡಾ ಸವಿದಿದ್ದ. ಆದರೂ ತನ್ನ ಚಾಳಿಯನ್ನು ಆತ ಬಿಟ್ಟಿರಲಿಲ್ಲ.

ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲುತ್ತಿದ್ದ ದ್ವಿಚಕ್ರ ವಾಹನಗಳನ್ನು ರಮೇಶ್ ಕಳವು ಮಾಡುತ್ತಿದ್ದ. ಬಳಿಕ ಅವುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕಡಿಮೆ ಬೆಲೆಗೆ ಜನರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಅಂತೆಯೇ ಕೆಲ ದಿನಗಳ ಹಿಂದೆ ನಾಗದೇವನಹಳ್ಳಿ ಬಳಿ ಬೈಕ್ ಕಳವು ಮಾಡಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.