ಸಾರಾಂಶ
ನಾಗಮಂಗಲ : ನಾಲ್ಕು ದೇವಸ್ಥಾನಗಳ ಮುಂಬಾಗಿಲು ಮುರಿದು ದೇವರಿಗೆ ಮಾಡಿಸಿಟ್ಟಿದ್ದ 2 ಕೆಜಿ ಗೂ ಹೆಚ್ಚು ಬೆಳ್ಳಿ, ಚಿನ್ನಾಭರಣಗಳು ಸೇರಿ ಸುಮಾರು 9 ಲಕ್ಷ ರು. ಮೌಲ್ಯದ ದೇವರ ಒಡವೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವ ಘಟನೆ ತಾಲೂಕಿನ ದೇವರ ಮಲ್ಲನಾಯ್ಕನಹಳ್ಳಿಯಲ್ಲಿ ಸಂಭವಿಸಿದೆ.
ಗ್ರಾಮದ ಶ್ರೀಏಳೂರು ಪಟ್ಟಲದಮ್ಮ ದೇವಸ್ಥಾನ, ಮಸಲಿಕಮ್ಮ ದೇವಸ್ಥಾನ. ಹೊನ್ನಾದೇವಿ ಮತ್ತು ಹುಚ್ಚಮ್ಮದೇವಿ ದೇವಸ್ಥಾನಗಳ ಮುಂಬಾಗಿಲು ಮುರಿದು ಒಳನುಗ್ಗಿರುವ ಖತರ್ನಾಕ್ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮರುದಿನ ಬೆಳಗ್ಗೆ ಎಂದಿನಂತೆ ಅರ್ಚಕರು ದೇವಸ್ಥಾನವನ್ನು ಶುಚಿಗೊಳಿಸಲು ಬಂದ ವೇಳೆ ದೇಗುಲದ ಬಾಗಿಲು ಮುರಿದು ಕಳ್ಳತನ ನಡೆಸಿರುವುದು ಗೊತ್ತಾಗಿದೆ.
ಗ್ರಾಮದ ಪಟ್ಟಲದಮ್ಮ ದೇವಸ್ಥಾನಲ್ಲಿದ್ದ 3 ಬೆಳ್ಳಿ ಛತ್ರಿ, ದೇವರ 3 ಬೆಳ್ಳಿ ಮುಖಸಿರಿ, 2 ಬೆಳ್ಳಿ ಕಿರೀಟ, 1 ಬೆಳ್ಳಿ ಬಟ್ಟಲು. 1 ಚಿನ್ನದ ತಾಳಿ, 1 ಬೆಳ್ಳಿ ಸರ, 7 ಬೆಳ್ಳಿ ಕಳಶವನ್ನು ದೋಚಿದ್ದಾರೆ. ಮಸಣಕಮ್ಮ ದೇವಸ್ಥಾನದ ಬಾಗಿಲು ಮುರಿದು 2 ಚಿನ್ನದ ಕಾಸು, 1 ತಾಳಿ, 4 ಚಿನ್ನದ ಗುಂಡು, 2 ಮೂಗುತಿಗಳನ್ನು ದೋಚಿದ್ದಾರೆ.
ಹೊನ್ನಾದೇವಿ ದೇವಸ್ಥಾನದಲ್ಲಿದ್ದ 2 ಚಿನ್ನದ ತಾಳಿ, 6 ಚಿನ್ನದ ಗುಂಡು ಸೇರಿದಂತೆ ದೇವರ ಹುಂಡಿ ಹಣವನ್ನು ದೋಚಿದ್ದಾರೆ. ಹುಚ್ಚಮ್ಮ ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಸುಮಾರು 9 ಲಕ್ಷಕ್ಕೂ ಹೆಚ್ಚು ಮೌಲ್ಯದ ದೇವರ ಒಡವೆಗಳು ಕಳುವಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದ ಹೊರವಲಯಲ್ಲಿರುವ ಎರಡು ದೇವಸ್ಥಾನ ಹಾಗೂ ಗ್ರಾಮದೊಳಗಿರುವ ಎರಡು ದೇವಸ್ಥಾನಗಳಲ್ಲಿ ಒಂದೇ ರಾತ್ರಿ ಕಳ್ಳತನ ನಡೆದಿರುವುದರಿಂದ ಗ್ರಾಮಸ್ಥರು ಹಾಗೂ ಆಸುಪಾಸಿನ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ನರಸಿಂಹಯ್ಯ ನೀಡಿರುವ ದೂರಿನನ್ವಯ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಗ್ರಾಮಾಂತರ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.
)
;Resize=(128,128))
;Resize=(128,128))
;Resize=(128,128))