ಅದೃಷ್ಟದ ಚೊಂಬು ಮಾರಲು ಯತ್ನಿಸಿದವರ ಬಂಧನ

| Published : Apr 20 2024, 01:35 AM IST / Updated: Apr 20 2024, 05:54 AM IST

arrest 3

ಸಾರಾಂಶ

ಪುರಾತನ ಕಾಲದ ಅದೃ಼ಷ್ಟದ ಚೊಂಬು ಎಂದು ನಂಬಿಸಿ ತಾಮ್ರದ ಚೊಂಬು ಮಾರಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಪುರಾತನ ಕಾಲದ ಹಣ ದ್ವಿಗುಣಗೊಳಿಸುವ ತಾಮ್ರದ ಚೊಂಬು ಎಂದು ಹೇಳಿ ಸಾರ್ವಜನಿಕರಿಗೆ ಕೋಟ್ಯಂತರ ರುಪಾಯಿಗೆ ಮಾರಾಟಕ್ಕೆ ಯತ್ನಿಸಿದ್ದ ರೈಸ್‌ಪುಲ್ಲಿಂಗ್ ದಂಧೆಯ ಮೂವರು ಕಿಡಿಗೇಡಿಗಳನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರದ ಶಿವಶಂಕರ್, ತಮಿಳುನಾಡು ರಾಜ್ಯದ ಈರೋಡ್‌ನ ಅಬ್ದುಲ್ ಸುಖುರ್ ಅಲಿಯಾಸ್ ರಮೇಶ್ ಹಾಗೂ ಪಂಜಾಬ್ ರಾಜ್ಯದ ಲೂಧಿಯಾನ ಸನ್ನಿಗಿಲ್ ಬಂಧಿತರಾಗಿದ್ದು, ಆರೋಪಿಗಳಿಂದ ₹69.79 ಲಕ್ಷ ನಗದು ಹಾಗೂ ತಾಮ್ರದ ಪಾತ್ರೆ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜಯನಗರದ 6ನೇ ಹಂತದ ಯಡಿಯೂರು ಕೆರೆ ಬಳಿ ಅದೃಷ್ಟದ ತರಲಿದೆ ಎಂದು ಹೇಳಿ ಸಾರ್ವಜನಿಕರಿಗೆ ರೈಸ್‌ಪುಲ್ಲಿಂಗ್ ಪಾತ್ರೆ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಎಸಿಪಿ ವಿ.ನಾರಾಯಣಸ್ವಾಮಿ ಹಾಗೂ ಇನ್‌ಸ್ಪೆಕ್ಟರ್‌ ದೀಪಕ್ ನೇತೃತ್ವದ ತಂಡ ಬಂಧಿಸಿದೆ.

ಶಿವಶಂಕರ್‌ ಗಾಜು ತಯಾರಿಕ ಕಂಪನಿ ಮಾಲಿಕನಾಗಿದ್ದರೆ, ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಅಬ್ದುಲ್‌ ಹಾಗೂ ಗಿಲ್ ತೊಡಗಿದ್ದರು. ಹಲವು ದಿನಗಳಿಂದ ತಮ್ಮ ಸ್ನೇಹಿತರ ಮೂಲಕ ಈ ಮೂವರು ಪರಸ್ಪರ ಪರಿಚಿತರು. ಹಣದಾಸೆಗೆ ಬಿದ್ದು ರೈಸ್‌ಫುಲ್ಲಿಂಗ್ ದಂಧೆಯಲ್ಲಿ ಮೂವರು ತೊಡಗಿದ್ದರು. ಅಂತೆಯೇ ಗಿಲ್‌ನನ್ನು ಸಂಪರ್ಕಿಸಿದ್ದ ಶಿವಶಂಕರ್ ಹಾಗೂ ಅಬ್ದುಲ್‌, ತಮ್ಮ ಬಳಿ ಹಣ ದ್ವಿಗುಣಗೊಳಿಸುವ ಪುರಾತನ ಕಾಲದ ತಾಮ್ರದ ಚೊಂಬು ಇದೆ. ಇದನ್ನು ನಿನಗೆ ಕಡಿಮೆ ಬೆಲೆ ಕೊಡುವುದಾಗಿ ಹೇಳಿ ಮಾತುಕತೆ ನಡೆಸಿದ್ದರು. ಆಗ ಸ್ನೇಹಿತರಿಂದ ತಾಮ್ರದ ಚೊಂಬು ಖರೀದಿಸಿ ಬೇರೊಬ್ಬರಿಗೆ ₹25 ಕೋಟಿಗೆ ಮಾರಾಟ ಮಾಡಲು ಗಿಲ್ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪೂರ್ವ ಒಪ್ಪಂದಂತೆ ಜಯನಗರದ ಯಡಿಯೂರು ಬಳಿ ಸ್ನೇಹಿತರನ್ನು ಭೇಟಿಯಾಗಿ ರೈಸ್‌ಪುಲ್ಲಿಂಗ್ ಚೊಂಬು ಖರೀದಿಸಲು ಗಿಲ್ ಬಂದಿದ್ದ. ಅಷ್ಟರಲ್ಲಿ ಈ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ ವೇಳೆ ಚೊಂಬು ಖರೀದಿಗೆ ಬ್ಯಾಗ್‌ನಲ್ಲಿ ಗಿಲ್ ತಂದಿದ್ದ ಹಣ ಜಪ್ತಿ ಮಾಡಲಾಯಿತು. ಇದೇ ರೀತಿ ಈ ಹಿಂದೆ ಸಹ ಆರೋಪಿಗಳು ಬೇರೆಯವರಿಗೆ ವಂಚಿಸಿ ಹಣ ಲಪಟಾಯಿಸಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.