ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಮನೆಗಳ ಬೀಗ ಮುರಿದು ನಗ-ನಾಣ್ಯ ದೋಚುತ್ತಿದ್ದ ಕುಖ್ಯಾತ ಖದೀಮರ ತಂಡವೊಂದು ಜ್ಞಾನಭಾರತಿ ಪೊಲೀಸರ ಬಲೆಗೆ ಬಿದ್ದಿದೆ.ಅರೆಕೆರೆಯ ಸಮರ್ಥ ಲೇಔಟ್‌ನ ಅಬ್ರಾಹಂ ಅಲಿಯಾಸ್ ಅಭಿ, ಎಜಿಬಿ ಲೇಔಟ್‌ನ ನಿಖಿಲ್ ಹಾಗೂ ಪದ್ಮನಾಭನಗರದ ಧನುಷ್ ಅಲಿಯಾಸ್ ದಡಿಯಾ ಬಂಧಿತರಾಗಿದ್ದು, ಆರೋಪಿಗಳಿಂದ 423 ಗ್ರಾಂ ಚಿನ್ನಾಭರಣ ಹಾಗೂ 710 ಗ್ರಾಂ ಬೆಳ್ಳಿ ವಸ್ತುಗಳು ಸೇರಿದಂತೆ 50 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಜ್ಞಾನಭಾರತಿ ಸಮೀಪದ ನಿವಾಸಿ ಕಾಂತರಾಜು ಅವರ ಮನೆಗೆ ಕನ್ನ ಹಾಕಿ ಕಳ್ಳರು ಚಿನ್ನಾಭರಣ ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮೂವರು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ನಗರದಲ್ಲಿ ಮನೆಗಳ್ಳತನಕ್ಕೆ ಆರೋಪಿಗಳು ಕುಖ್ಯಾತರಾಗಿದ್ದರು. ಬೀಗ ಹಾಕಿದ ಮನೆಗಳನ್ನು ಗುರುತಿಸಿ ಬಳಿಕ ಇರುಳಿನಲ್ಲಿ ಆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಅಂತೆಯೇ ತುಮಕೂರು ಜಿಲ್ಲೆ ಕೊರಟೆಗೆರೆ ತಾಲೂಕಿನಲ್ಲಿರುವ ತಮ್ಮೂರಿಗೆ ಪರಿವಾರ ಸಮೇತ ಕಾಂತರಾಜು ತೆರಳಿದ್ದಾಗ ಅವರ ಮನೆಗೆ ಆರೋಪಿಗಳು ಕನ್ನ ಹಾಕಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ನೆರೆಮನೆಯಲ್ಲಿ ಕಳವು:ತನ್ನ ನೆರೆಹೊರೆಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮಾರ್ಬಲ್ ಕೆಲಸಗಾರನೊಬ್ಬ ಸಂಜಯನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಟೆಲಿಫೋನ್ ಲೇಔಟ್ ನಿವಾಸಿ ಯಾಸಿನ್ ಬಂಧಿತನಾಗಿದ್ದು, ತನ್ನ ನೆರೆಯಲ್ಲಿ ನೆಲೆಸಿರುವ ಕೆ.ಕೆ.ಪೊನ್ನಪ್ಪ ಅವರ ಮನೆಯಲ್ಲಿ 302 ಗ್ರಾಂ ಆಭರಣ ಕಳವು ಮಾಡಿದ್ದ. ಕೆಲ ದಿನಗಳ ಹಿಂದೆ ಮನೆ ಸಮೀಪದ ಅಂಗಡಿಗೆ ಪೊನ್ನಪ್ಪ ಅವರು ತೆರಳಿದ್ದಾಗ ಯಾಸಿನ್ ಈ ಕೃತ್ಯ ಎಸಗಿದ್ದ. ಆರೋಪಿಯಿಂದ 150 ಗ್ರಾಂ ಚಿನ್ನ ಹಾಗೂ 40 ಸಾವಿರ ರು. ನಗದು ಸೇರಿದಂತೆ 14 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.