ಸ್ನೇಹಿತನನ್ನೇ ಅಪಹರಿಸಿ ಸುಲಿಗೆ ಮಾಡಿದ್ದ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ನೇಹಿತನನ್ನೇ ಅಪಹರಿಸಿ ಸುಲಿಗೆ ಮಾಡಿದ್ದ ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗೂಡ್ಸ್ ವಾಹನ ಚಾಲಕ ಬಸವರಾಜ್ ಎಂಬಾತನನ್ನು ಅಪಹರಿಸಿ ಆತನಿಂದ ಹಣ ಸುಲಿಗೆ ಮಾಡಿದ್ದ ಎಚ್. ಹೊಸಹಳ್ಳಿ ನಿವಾಸಿಗಳಾದ ಖಾಜ (19), ಜಾನ್ ಫೀಟರ್ (20 ) ಮತ್ತೊಬ್ಬ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ಬಸವರಾಜ್ ಅವರು ಕ್ಯಾಬ್ ಖರೀದಿಸುವ ಸಲುವಾಗಿ ಗೂಡ್ಸ್ ವಾಹನವನ್ನು ಮಾರಾಟ ಮಾಡಿದ್ದು, ಆ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ವಿಷಯ ತಿಳಿದ ಬಸವರಾಜ್ ಸ್ನೇಹಿತ ಖಾಜ ಮತ್ತಿಬ್ಬರೊಂದಿಗೆ ಸೇರಿಕೊಂಡು ಜ.30 ರ ಸಂಜೆ 7 ಗಂಟೆಯ ಸುಮಾರಿಗೆ ಬಸವರಾಜ್ ಅವರಿಗೆ ಕರೆ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡು ಬಳಿಕ ಆಟೋದಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚೆನ್ನಾಗಿ ಥಳಿಸಿ 1500 ರು. ಆತನ ಬಳಿಯಿಂದ ಕಸಿದುಕೊಂಡಿದ್ದರು. ಇಷ್ಟೇ ಅಲ್ಲದೇ 50 ಸಾವಿರ ಹಣವನ್ನು ತರಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಬಸವರಾಜ್ ಈ ಸಂಬಂಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.