ಸಾರಾಂಶ
ನಗರದ ಹೊರವಲಯದ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ಮಾಲೀಕನಿಗೆ ಆಟಿಕೆ ಪಿಸ್ತೂಲಿನಿಂದ ಬೆದರಿಸಿ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಪೀಣ್ಯ ದಾಸರಹಳ್ಳಿ
ನಗರದ ಹೊರವಲಯದ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ಮಾಲೀಕನಿಗೆ ಆಟಿಕೆ ಪಿಸ್ತೂಲಿನಿಂದ ಬೆದರಿಸಿ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಿಹಾರ ಹಾಗೂ ನಗರದ ದರೋಡೆಕೋರ ಬಂಧನದಿಂದ 40ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ರಫಿಕ್, ಮೊಹಮ್ಮದ್ ಇಬ್ತೇಕರ್, ರಂಶಾದ್ ಎಂದು ಗುರುತಿಸಲಾಗಿದೆ.ಈ ದರೋಡೆಕೋರರ ಗ್ಯಾಂಗ್ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದರೋಡೆ ಹಾಗೂ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಕಳೆದ ಜುಲೈ 21 ರಂದು ಮಾಗಡಿ ರಸ್ತೆಯ ಮಾಚೋಹಳ್ಳಿ ಜ್ಯುವೆಲ್ಲರಿ ಶಾಪ್‌ಗೆ ಈ ದರೋಡೆಕೋರರ ತಂಡ ನುಗ್ಗಿ ಮಾಲೀಕನಿಗೆ ಆಟಿಕೆ ಗನ್ ತೋರಿಸಿ ಬೆದರಿಸಿ ಆಭರಣಗಳನ್ನು ದೋಚಿ ಪರಾರಿಯಾಗಿತ್ತು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು ಬೇರೆ ಬೇರೆ ರಾಜ್ಯಗಳಿಗೂ ಮಾಹಿತಿ ರವಾನಿಸಿ ಆರೋಪಿಗಳಿಗಾಗಿ ಹುಡುಕಾಡುತ್ತಿದ್ದರು. ಇದೀಗ ಮೂವರನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ಮುಂದುವರಿಸಿದ್ದಾರೆ.