ಸಾರಾಂಶ
ಶ್ರೀರಂಗಪಟ್ಟಣ : ವಿ.ಸಿ.ನಾಲೆಯಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ತಾಲೂಕಿನ ನಾರ್ತ್ ಬ್ಯಾಂಕ್ ಬಳಿ ಇರುವ ವಿಸಿ ನಾಲೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮೈಸೂರಿನ ಗೌಸಿಯಾನಗರದ ಸೋನು (17), ಸಿಮ್ರಾನ್ (16), ಸಿದ್ದೀಖ್ (9) ಮೃತ ದುರ್ದೈವಿ ಮಕ್ಕಳು. ಮೃತ ಮಕ್ಕಳು ಚಿಕ್ಕಾರಳ್ಳಿಯ ತಮ್ಮ ಸೋದರ ಮಾವನ ಮನೆಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಈ ಮೂವರು ಮಕ್ಕಳು ತಮ್ಮ ಅಜ್ಜಿಯೊಂದಿಗೆ ನಾಲೆ ಬಳಿ ತೆರಳಿದ್ದರು. ಅಜ್ಜಿ ನಾಲೆಯಲ್ಲಿ ಮುಖ ತೊಳೆಯಲು ಮುಂದಾಗಿದ್ದಾರೆ. ಈ ವೇಳೆ ಸಿದ್ದೀಖ್ ಕಾಲು ತೊಳೆಯಲು ನಾಲೆಗೆ ಇಳಿಯುತ್ತಿದ್ದಂತೆ ಕಾಲು ಜಾರಿ ಬಿದ್ದಿದ್ದಾನೆ. ನಾಲಾ ಏರಿ ಮೇಲಿದ್ದ ಸೋನು ಹಾಗೂ ಸಿಮ್ರಾನ್ ತಮ್ಮನ ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಸಾಧ್ಯವಾಗಿದೆ ಈ ಮೂವರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹಾಗೂ ಸ್ಥಳೀಯರು ನಾಲೆಯಲ್ಲಿ ಮುಳಗಿದ್ದ ಮಕ್ಕಳ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಸಿ ಅಂತಿಮವಾಗಿ ಮೂವರು ಮಕ್ಕಳ ಮೃತದೇಹ ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.