1.20 ಕೋಟಿ ರು. ವೆಚ್ಚದ ವಿಸಿ ನಾಲೆಯ ನೂತನ ಸೇತುವೆ ಶಾಸಕರಿಂದ ಉದ್ಘಾಟನೆ

| Published : Feb 02 2025, 11:45 PM IST

ಸಾರಾಂಶ

ಎಲೆಕೆರೆ ಹ್ಯಾಂಡ್‌ಪೋಸ್ಟ್‌ನಲ್ಲಿ ವಿಸಿ ನಾಲೆ ಸೇತುವೆ ದುರಸ್ಥಿಗೊಂಡಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ವಿಸಿ ನಾಲೆ ಆಧುನೀಕರಣ ಕಾಮಗಾರಿ ಜತೆಯಲ್ಲಿ ಸೇತುವೆ ಅಭಿವೃದ್ಧಿ ಪಡಿಸಲಾಗಿದೆ. ಇಂದು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಎಲೆಕೆರೆ ಹ್ಯಾಂಡ್‌ಪೋಸ್ಟ್‌ನಲ್ಲಿ 1.20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ವಿಸಿ ನಾಲೆಯ ನೂತನ ಸೇತುವೆಯನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಎಲೆಕೆರೆ ಹ್ಯಾಂಡ್‌ಪೋಸ್ಟ್‌ನಲ್ಲಿ ವಿಸಿ ನಾಲೆ ಸೇತುವೆ ದುರಸ್ಥಿಗೊಂಡಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ವಿಸಿ ನಾಲೆ ಆಧುನೀಕರಣ ಕಾಮಗಾರಿ ಜತೆಯಲ್ಲಿ ಸೇತುವೆ ಅಭಿವೃದ್ಧಿ ಪಡಿಸಲಾಗಿದೆ. ಇಂದು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಚಾಲನೆ ನೀಡಲಾಗಿದೆ ಎಂದರು.

ಎಲೆಕೆರೆ ಹ್ಯಾಂಡ್‌ಪೋಸ್ಟ್ ಪ್ರಮುಖ ವೃತ್ತ ಆಗಿರುವುದರಿಂದ ಇದನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಹಿಂದೆ ಇಲ್ಲಿ ಬಸ್ ನಿಲ್ದಾಣ ನಿರ್ಮಿಸಲು 75 ಲಕ್ಷ ರು. ಹಣ ಮಂಜೂರಾಗಿತ್ತು. ಆದರೆ, ಬಸ್ ನಿಲ್ದಾಣಕ್ಕೆ ಗುರುತಿಸಿದ್ದ ಸ್ಥಳ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ್ದರಿಂದ ಜಾಗ ಸಮಸ್ಯೆಯಿಂದ ನಿಲ್ದಾಣವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಇದರಿಂದ ಮಂಜೂರಾಗಿದ್ದ ಹಣ ವಾಪಸ್ಸಾಗಿದೆ. ಇದೀಗ ಹೊಸದಾಗಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೊಗೌಡ, ಹರವು ಪ್ರಕಾಶ್, ಮಂಜುನಾಥ್, ಎಲೆಕೆರೆ ಚಂದ್ರಣ್ಣ, ವಿಸಿ ಎಇಇ ಜಯರಾಮ್ ಸೇರಿದಂತೆ ಹಲವು ರೈತಸಂಘದ ಮುಖಂಡರು ಹಾಜರಿದ್ದರು.

ಮುದ್ದುಂಗೆರೆಯಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮುದ್ದುಂಗೆರೆ ಗ್ರಾಮದಲ್ಲಿ ಶ್ರೀಎಲ್ಲಮ್ಮ ತಾಯಿ ದೇವಸ್ಥಾನದ ರಸ್ತೆ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್‌ಗೌಡ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ರಸ್ತೆ ಕಾಮಗಾರಿಗೆ ಒಟ್ಟು ೭ ಲಕ್ಷ ರು. ಬಿಡುಗಡೆ ಮಾಡಿದ್ದು, ಈ ಭಾಗದ ಹಲವು ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು.

ಮುದ್ದುಗೆರೆ ವ್ಯಾಪ್ತಿಗೆ ಒಟ್ಟು ೫ ಕೋಟಿ ೮೦ ಲಕ್ಷ ರು. ಅನುದಾನ ನೀಡುತ್ತಿದ್ದೇನೆ ತಾಲೂಕಿನ ಎಲ್ಲಾ ಗ್ರಾಮಗಳ ಅಭಿವೃದ್ಧಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೃಷ್ಣೇಗೌಡ, ಸಹಾಯಕ ಎಂಜಿನಿಯರ್ ಮಂಜುನಾಥ್, ಗ್ರಾಪಂ ಸದಸ್ಯ ಮರಿಸ್ವಾಮಿ, ಮುಖಂಡರಾದ ಎಂ.ಸಿ.ನಾರಾಯಣಪ್ಪ, ಎಂ.ಎಸ್.ಕೃಷ್ಣ, ಎಂ.ಎಸ್.ರಾಮಣ್ಣ, ಮುತ್ತುರಾಜ್, ಹರೀಶ್‌ಕುಮಾರ್ ಭಾಗವಹಿಸಿದ್ದರು.