ಸಾರಾಂಶ
ಬೆಂಗಳೂರು : ರಾಜಧಾನಿಯಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದೆ. ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಕಾರೊಂದನ್ನು ಹಿಂಬಾಲಿಸಿ ಅಡ್ಡಗಟ್ಟಿ ಕಾರಿನ ಗಾಜಿಗೆ ಕಲ್ಲು ಹೊಡೆದು ಪುಂಡಾಟ ಮೆರೆದಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಸವನಹಳ್ಳಿಯ ಅಮೃತ ಕಾಲೇಜು ಬಳಿ ಬುಧವಾರ ರಾತ್ರಿ ಸುಮಾರು 9.30ಕ್ಕೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಕಾರಿನ ಗಾಜಿಗೆ ಕಲ್ಲು ಹೊಡೆದ ಪರಿಣಾಮ ಕಾರಿನೊಳಗಿದ್ದ ಐದು ವರ್ಷದ ಬಾಲಕನ ತಲೆಗೆ ಗಾಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಅನೂಪ್ ಜಾರ್ಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, ಘಟನೆ ಸಂಬಂಧ ಚೂಡಸಂದ್ರದ ಕೃಷ್ಣಮೂತಿ (24) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಬ್ಬ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?: ಬೆಳ್ಳಂದೂರು ನಿವಾಸಿ ಅನೂಪ್ ಜಾರ್ಜ್ ಅವರು ಪತ್ನಿ ಜಿಸ್ ಜಾಕೋಬ್ ಹಾಗೂ ಇಬ್ಬರು ಮಕ್ಕಳ ಜತೆಗೆ ಬುಧವಾರ ಶಾಪಿಂಗ್ ತೆರಳಿದ್ದರು. ಶಾಪಿಂಗ್ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ತೆರಳುವಾಗ ಕಸವನಹಳ್ಳಿಯ ಅಮೃತ ಕಾಲೇಜಿನ ಬಳಿ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನ ಬಳಿ ಬಂದು ಕಾರಿನ ಕಿಟಕಿ ಗಾಜು ಇಳಿಸುವಂತೆ ಧಮಕಿ ಹಾಕಿದ್ದಾರೆ.
ಇದರಿಂದ ಆತಂಕಗೊಂಡ ಅನೂಪ್, ಕಾರಿನ ಕಿಟಕಿ ಗಾಜು ಇಳಿಸದೆ ಮುಂದಕ್ಕೆ ಕಾರನ್ನು ಚಲಾಯಿಸಿದ್ದಾರೆ. ಅಷ್ಟರಲ್ಲಿ ದುಷ್ಕರ್ಮಿಗಳು ರಸ್ತೆ ಬದಿ ಬಿದ್ದಿದ್ದ ಕಲ್ಲು ತೆಗೆದುಕೊಂಡು ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜಿಗೆ ಎಸೆದಿದ್ದಾರೆ. ಈ ವೇಳೆ ಕಿಟಕಿ ಗಾಜು ಒಡೆದು ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಐದು ವರ್ಷದ ಬಾಲಕನ ತಲೆಗೆ ಗಂಭೀರ ಗಾಯವಾಗಿದೆ.
ಅನಿರೀಕ್ಷಿತ ಘಟನೆಯಿಂದ ಆತಂಕಗೊಂಡ ಅನೂಪ್ ಹಾಗೂ ಪತ್ನಿ ಜೋರಾಗಿ ಚೀರಾಡಿದ್ದಾರೆ. ಬಳಿಕ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ.
ಬಾಲಕನ ತಲೆಗೆ ಗಂಭೀರ ಗಾಯ: ಬಳಿಕ ಅನೂಪ್ ದಂಪತಿ ಗಾಯಗೊಂಡಿದ್ದ ತಮ್ಮ ಮಗನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಬಾಲಕನ ತಲೆಯಲ್ಲಿ ಆಗಿದ್ದ ಗಾಯಕ್ಕೆ ಮೂರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ಇನ್ನು ಅನೂಪ್ ದಂಪತಿಯ ಮಗಳು ಘಟನೆಯಿಂದ ಬೆಚ್ಚಿಬಿದ್ದಿದ್ದಾಳೆ. ದುಷ್ಕರ್ಮಿಗಳ ಈ ಪುಂಡಾಟದ ಘಟನೆಯನ್ನು ಅನೂಪ್ ಪತ್ನಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.