ಸಾರಾಂಶ
ನಾರಗೋನಹಳ್ಳಿ ಗ್ರಾಮದ ಭೋಜೇಗೌಡರ ಪುತ್ರ ಪುಟ್ಟೇಗೌಡ (55) ತರಕಾರಿ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡು ತಮ್ಮ ಜಮೀನಿನ ತೆಂಗಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಸಾಲಬಾಧೆಯಿಂದ ಬೇಸತ್ತ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ನಾರಗೋನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.ಗ್ರಾಮದ ಭೋಜೇಗೌಡರ ಪುತ್ರ ಪುಟ್ಟೇಗೌಡ (55) ತರಕಾರಿ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡು ತಮ್ಮ ಜಮೀನಿನ ತೆಂಗಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮದಲ್ಲಿ 3 ಎಕರೆ ಕೃಷಿ ಭೂಮಿ ಹೊಂದಿದ್ದ ಪುಟ್ಟೇಗೌಡ ಕೊಳವೆ ಬಾವಿ ಕೊರೆಸಿ ಟೊಮೋಟೊ ಬೆಳೆ ಬೆಳೆಯುವ ಉದ್ದೇಶದಿಂದ ಸಂಘ ಸಂಸ್ಥೆಗಳಿಂದ ಲಕ್ಷಾಂತರ ರು. ಸಾಲ ಪಡೆದಿದ್ದರು. ಅಲ್ಲದೇ ಶಿಥಿಲಗೊಂಡಿದ್ದ ವಾಸದ ಮನೆಯನ್ನು ನಿರ್ಮಿಸುವ ಸಲುವಾಗಿ 7 ಲಕ್ಷ ರು. ಕೈಸಾಲ ಮಾಡಿದ್ದರು ಎನ್ನಲಾಗಿದೆ.ಕಷ್ಟಪಟ್ಟು ಬೆಳೆದ ಟೊಮೊಟೋ ಬೆಳೆಗೆ ಸರಿಯಾದ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಇದರ ಜೊತೆಗೆ ಮನೆ ನಿರ್ಮಿಸಲು ಮಾಡಿದ ಲಕ್ಷಾಂತರ ರು. ಸಾಲ ತೀರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡ ಪುಟ್ಟೇಗೌಡ ಗುರುವಾರ ಬೆಳಗ್ಗೆ 5.30ರ ಸಮಯದಲ್ಲಿ ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ಹೋದವರು ತಮ್ಮದೇ ಜಮೀನಿನ ತೆಂಗಿನ ಮರವೊಂದಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಿಸಿದ ಕುಟುಂಬಸ್ಥರು ಸ್ಥಳೀಯರ ನೆರವಿನೊಂದಿಗೆ ಪುಟ್ಟೇಗೌಡರ ಮೃತದೇಹವನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು.ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಪುಟ್ಟೇಗೌಡರ ಪತ್ನಿ ಮಣಿಯಮ್ಮ ನೀಡಿರುವ ದೂರಿನ್ವಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪುಟ್ಟೇಗೌಡರಿಗೆ ಪತ್ನಿ ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ.