ಸಾರಾಂಶ
ಎಟಿಎಂಗೆ ಹಣ ತುಂಬಿಸಲು ಬರುವವರ ಬಳಿ ಹಣ ಪಡೆದು ಆ್ಯಪ್ ಮೂಲಕ ಹಣ ಹಾಕುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ವೈಮಾನಿಕ ಕಂಪನಿಯ ಮಾಜಿ ನೌಕರನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಟಿಎಂ ಘಟಕಗಳಿಗೆ ಹಣ ಡೆಪಾಸಿಟ್ ಮಾಡಲು ಬರುವ ಸಾರ್ವಜನಿಕರಿಗೆ ವಂಚಿಸಿ ಹಣ ಲಪಟಾಯಿಸುತ್ತಿದ್ದ ಖಾಸಗಿ ವೈಮಾನಿಕ ಕಂಪನಿಯ ಮಾಜಿ ಉದ್ಯೋಗಿಯೊಬ್ಬನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರ್.ಟಿ.ನಗರದ ಸಾಹಿಲ್ ಬಂಧಿತನಾಗಿದ್ದು, ಆರೋಪಿಯಿಂದ ಹಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಬಸವೇಶ್ವರ ನಗರ ಮುಖ್ಯರಸ್ತೆಯಲ್ಲಿ ಕೆನರಾ ಬ್ಯಾಂಕ್‌ನ ಎಟಿಎಂಗೆ ಗ್ರಾಹಕರೊಬ್ಬರು ಬಂದಿದ್ದರು. ಆಗ ಅವರಿಗೆ ವಂಚಿಸಿ ಸಾಹಿಲ್ ಹಣ ದೋಚಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಬಾತ್ಮೀದಾರರ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಕೆಲ ತಿಂಗಳ ಹಿಂದೆ ಕರ್ತವ್ಯಲೋಪದ ಆರೋಪದ ಮೇರೆಗೆ ಖಾಸಗಿ ವೈಮಾನಿಕ ಕಂಪನಿಯಲ್ಲಿ ಕೆಲಸದಿಂದ ಸಾಹಿಲ್ ವಜಾಗೊಂಡಿದ್ದ. ನಿರುದ್ಯೋಗಿಯಾಗಿದ್ದರಿಂದ ಸಾಹಿಲ್ ಸುಲಭವಾಗಿ ಹಣ ಸಂಪಾದನೆಗೆ ವಂಚನೆ ಕೃತ್ಯಕ್ಕಿಳಿದಿದ್ದ. ಎಟಿಎಂನ ಸಿಡಿಎಂ ಮೆಷಿನ್‌ಗಳಲ್ಲಿ ಹಣವನ್ನು ಡೆಪಾಸಿಟ್ ಮಾಡಲು ಬರುವ ಸಾರ್ವಜನಿಕರ ಬಳಿ ಹಣವನ್ನು ಪಡೆದು ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡಿದ ಹಾಗೆ ನಕಲಿ ಆ್ಯಪ್‌ಗಳ ಮೂಲಕ ಮೆಸೇಜ್‌ಗಳನ್ನು ಸೃಷ್ಟಿಸಿ ಆತ ವಂಚಿಸುತ್ತಿದ್ದ. ಇದೇ ರೀತಿ ರೆಸಿಡೆನ್ಸಿ ರಸ್ತೆ, ರಾಜಾಜಿನಗರ, ಸುಬ್ರಹ್ಮಣ್ಯನಗರ ಹಾಗೂ ಬಸವೇಶ್ವರ ನಗರ ಸೇರಿದಂತೆ ಇತರೆಡೆ ಕೃತ್ಯವನ್ನು ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.ಹೇಗೆ ವಂಚನೆ?:
ಎಟಿಎಂ ಕೇಂದ್ರಗಳ ಬಳಿ ಸಾಹಿಲ್ ನಿಲ್ಲುತ್ತಿದ್ದ. ಆಗ ಅಲ್ಲಿಗೆ ಹಣ ಜಮೆ ಮಾಡಲು ಬರುವ ಗ್ರಾಹಕರಿಗೆ ‘ನನಗೆ ತುರ್ತಾಗಿ ಹಣಬೇಕಿದೆ. ಆದರೆ ನನ್ನ ಎಟಿಎಂ ಕಾರ್ಡ್ ವರ್ಕ್ ಆಗುತ್ತಿಲ್ಲ. ನೀವು ನಗದು ನೀಡಿದರೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡುವುದಾಗಿ’ ಹೇಳುತ್ತಿದ್ದ. ಈತನ ಮಾತು ನಂಬಿ ಹಣ ನೀಡಿದರೆ ಅದಕ್ಕೆ ಪ್ರತಿಯಾಗಿ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಸಂದೇಶ ತೋರಿಸಿ ವಂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.