ಮಳವಳ್ಳಿ:

ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಟಿ.ಕಾಗೇಪುರ ಬಳಿಯ ಮಳವಳ್ಳಿ-ಮದ್ದೂರು ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಪಟ್ಟಣದ ಗಂಗಾಮತ ಬೀದಿಯ ರಾಜಣ್ಣರ ಪುತ್ರ ಮಧು (33) ಮೃತಪಟ್ಟವರು.

ಮಂಡ್ಯದಲ್ಲಿ ವೀಳ್ಯದೆಲೆ ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಮಾಡಿಕೊಂಡಿದ್ದ ಮಧು ಪ್ರತಿನಿತ್ಯ ಮಳವಳ್ಳಿಯಿಂದ ವೀಳ್ಯದೆಲೆ ತೆಗೆದುಕೊಂಡು ಹೋಗುತ್ತಿದ್ದರು. ಶನಿವಾರ ಸಹ ವೀಳ್ಯದೆಲೆ ತೆಗೆದುಕೊಂಡು ಮಂಡ್ಯಕ್ಕೆ ಹೋಗುತ್ತಿದ್ದ ವೇಳೆ ಟಿ.ಕಾಗೇಪುರ ಬಳಿಯ ಮಳವಳ್ಳಿ-ಮದ್ದೂರು ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಮಧು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ: ಬೈಕ್ ಸವಾರನಿಗೆ ಗಾಯ


ಹಲಗೂರು:ಕೆಎಸ್‌ಆರ್‌ಟಿಸಿ ಬಸ್ ಮತ್ತು ಮೋಟಾರ್‌ ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಹರೀಶ್ ತೀವ್ರ ಗಾಯಗೊಂಡ ಘಟನೆ ಹಲಗೂರು ಕೆರೆ ಏರಿಯ ಮೇಲೆ ಭಾನುವಾರ ಸಂಜೆ ನಡೆದಿದೆ.

ಸಮೀಪದ ಬಾಣಸಮುದ್ರ ಬಳಿಯ ಅಕ್ವೇರಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಕಾರ್ಯ ನಿಮಿತ್ತ ಹಲಗೂರಿಗೆ ಬಂದು ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ಖರೀದಿಸಿಕೊಂಡು ಹಿಂದುರುಗಿ ಬಾಣಸಮುದ್ರ ಕಡೆಗೆ ತೆರಳುತ್ತಿದ್ದಾಗ ಮಳವಳ್ಳಿ ಕಡೆಯಿಂದ ಬಂದ ಸಾರಿಗೆ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹರೀಶ್ ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಬೈಕ್ ನಲ್ಲಿ ಕುಳಿತಿದ್ದ ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಗಾಯಳಾಗಳಿಗೂ ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ಕೊಡಿಸಿ, ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.