ಶಾಲೆ ಬಳಿ ಸಂಚಾರ ನಿಯಮಉಲ್ಲಂಘನೆ: ₹9.48 ಲಕ್ಷ ದಂಡ

| Published : Feb 03 2024, 01:53 AM IST

ಶಾಲೆ ಬಳಿ ಸಂಚಾರ ನಿಯಮಉಲ್ಲಂಘನೆ: ₹9.48 ಲಕ್ಷ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆ-ಕಾಲೇಜು ಬಳಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರ ಸಂಚಾರ ಪೊಲೀಸರು ನಗರದ ಶಾಲಾ-ಕಾಲೇಜುಗಳ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದು, ಗುರುವಾರವೂ 1,896 ಪ್ರಕರಣ ದಾಖಲಿಸಿ ₹9.48 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಶಾಲಾ-ಕಾಲೇಜುಗಳ ಸುತ್ತಮುತ್ತಲ ರಸ್ತೆಗಳಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ಸಂಚಾರ ಪೊಲೀಸರು ಪ್ರತಿ ಸಂಚಾರ ಠಾಣಾ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸುತ್ತಮುತ್ತಲ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡು ಸಂಚಾರ ನಿಯಮ ಉಲ್ಲಂಘಿಸುವ ಸವಾರರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡುತ್ತಿದ್ದಾರೆ.

ಗುರುವಾರ ನಗರದಲ್ಲಿ ನಡೆದ ವಿಶೇಷ ಕಾರ್ಯಾಚರಣೆ ವೇಳೆ ಹೆಲ್ಮೆಟ್‌ ರಹಿತ ಸವಾರಿ 1,279 ಪ್ರಕರಣ, ಟ್ರಿಪಲ್‌ ರೈಡಿಂಗ್‌ 85, ನೋ ಎಂಟ್ರಿ 455, ಪಾದಾಚಾರಿ ಮಾರ್ಗದಲ್ಲಿ ಚಾಲನೆ 77 ಸೇರಿದಂತೆ ಒಟ್ಟು 1,896 ಪ್ರಕರಣ ದಾಖಲಿಸಲಾಗಿದೆ.

ಪೂರ್ವ ವಿಭಾಗದಲ್ಲಿ 639 ಪ್ರಕರಣ ದಾಖಲು:

ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳ ಬಳಿ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದ ಸವಾರರ ವಿರುದ್ಧ 639 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಓರ್ವ ಸವಾರ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಆತನ ಪೋಷಕರು ಹಾಗೂ ವಾಹನದ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಎಚ್ಚರಿಕೆ ನೀಡಿ ಅಪ್ರಾಪ್ತರು ಹಾಗೂ ಅವರ ಪೋಷಕರಿಗೆ ಸಂಚಾರ ನಿಯಮ ಪಾಲನೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಗಿದೆ.