ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿ : ಸವಾರರಿಗೆ ಗಾಯ | ಸಾಲಭಾದೆಯಿಂದ ರೈತ ಆತ್ಮಹತ್ಯೆ

| Published : Sep 21 2024, 01:46 AM IST / Updated: Sep 21 2024, 04:56 AM IST

ಸಾರಾಂಶ

ದಳವಾಯಿಕೋಡಿಹಳ್ಳಿಯಲ್ಲಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ, ಪಾಲಹಳ್ಳಿಯಲ್ಲಿ ರೈತರೊಬ್ಬರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಹಲಗೂರು : ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗೆ ಡಿಕ್ಕಿಯಾಗಿ ಇಬ್ಬರು ಸವಾರರು ಗಾಯಗೊಂಡಿರುವ ಘಟನೆ ದಳವಾಯಿಕೋಡಿಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಜರುಗಿದೆ.

ಮೂಲತಃ ಬೆಂಗಳೂರಿನ ಸಂತೋಷ್ ಎಂಬುವವರು ಹುಚ್ಚೇಗೌಡನ ದೊಡ್ಡಿ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಕಾರ್ಯನಿಮಿತವಾಗಿ ಬಂದು ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಮಳವಳ್ಳಿ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ಎದುರಿನಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಸಂತೋಷ್ ಅವರನ್ನು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ: ರೈತ ಆತ್ಮಹತ್ಯೆ

ಶ್ರೀರಂಗಪಟ್ಟಣ : ಸಾಲಭಾದೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಕಳ್ಳಿಕೊಪ್ಪಲು ಬೀದಿ ನಿವಾಸಿ ಲೇ.ಮರಿದೇವೇಗೌಡರ ಪುತ್ರ ಗೋವಿಂದರಾಜು (42) ನೇಣಿಗೆ ಶರಣಾದ ರೈತ.ಮೃತ ಗೋವಿಂದರಾಜು ಬ್ಯಾಂಕ್‌ನಿಂದ ಪಡೆದಿದ್ದ ಸಾಲ ತೀರಿಸಲು ತನ್ನ ಜಮೀನು ಮಾರಾಟ ಮಾಡಿ ಸ್ವಲ್ಪ ಸಾಲ ತೀರಿಸಿದ್ದರು. ವಿವಿಧ ಸಂಘ, ಸಂಸ್ಥೆಗಳು ಹಾಗೂ ಕೈ ಸಾಲವಾಗಿ ಪಡೆದಿದ್ದ ಸುಮಾರು 3 ಲಕ್ಷ ರು. ಸಾಲ ಉಳಿದಿತ್ತು ಎಂದು ತಿಳಿದು ಬಂದಿದೆ. ಸಾಲಗಾರರ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಗೋವಿಂದರಾಜು ಪತ್ನಿ ನೇತ್ರಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.