ಸಾರಾಂಶ
ಸಂಚಾರಿ ಪೊಲೀಸರ ತಪಾಸಣೆಯನ್ನು ತಪ್ಪಿಸಿಕೊಳ್ಳಲು ಯುವಕರು ಬ್ಯಾರಿಕೇಟ್ ಹಾಗೂ ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ನಗರದ ನಂದಾ ಸರ್ಕಲ್‌ನಲ್ಲಿ ನಡೆದಿದೆ.
ಮಂಡ್ಯ : ಸಂಚಾರಿ ಪೊಲೀಸರ ತಪಾಸಣೆಯನ್ನು ತಪ್ಪಿಸಿಕೊಳ್ಳಲು ಯುವಕರು ಬ್ಯಾರಿಕೇಟ್ ಹಾಗೂ ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ನಗರದ ನಂದಾ ಸರ್ಕಲ್‌ನಲ್ಲಿ ನಡೆದಿದೆ.
ಮಂಡ್ಯದ ಅಜಯ್ (25), ತಾಲೂಕಿನ ಹೊಡಾಘಟ್ಟದ ಚಂದನ್ (25) ಹಾಗೂ ಹಾಲಹಳ್ಳಿ ಸ್ಲಂ ನಿವಾಸಿ ಬತುಲಾ (60) ಗಾಯಗೊಂಡವರು.
ಸಂಚಾರಿ ಪೊಲೀಸರು ಹೆದ್ದಾರಿಯ ಪೂರ್ವ ಪೊಲೀಸ್ ಠಾಣೆ, ನಂದಾ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಸವಾರಿ ಮಾಡುತ್ತಿದ್ದವರನ್ನು ಹಿಡಿದು ದಂಡ ಹಾಕುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಚಂದನ್ ಮತ್ತು ಅಜಯ್ ಅವರುಗಳು ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಬರುತ್ತಿದ್ದುದನ್ನು ಕಂಡ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರು. ಆದರೆ, ಯುವಕರು ಅತಿ ವೇಗದಲ್ಲಿ ಬೈಕ್ ಚಲಾಸಿ ತಪ್ಪಿಸಿಕೊಳ್ಳಲು ಯತ್ನಿಸಿದರು.
ಸ್ಥಳದಲ್ಲೇ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ರಸ್ತೆಯಲ್ಲಿಡಲಾಗಿದ್ದ ಬ್ಯಾರಿಕೇಟ್‌ನ್ನು ಬೈಕ್‌ಗೆ ಅಡ್ಡಲಾಗಿ ಎಳೆದರು. ಗಾಬರಿಗೊಳಗಾದ ಸವಾರ ಬ್ಯಾರಿಕೇಟ್‌ಗೆ ಗುದ್ದಿ ಮುಂದಕ್ಕೆ ಚಲಾಯಿಸಿದ್ದ ಪಕ್ಕದಲ್ಲೇ ಬರುತ್ತಿದ್ದ ಮತ್ತೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ಮೂವರೂ ಗಾಯಗೊಂಡರು.
ಈ ದೃಶ್ಯ ಕಂಡ ಸಾರ್ವಜನಿಕರು ಪೊಲೀಸರ ವಿರುದ್ಧ ಹರಿಹಾಯ್ದರು. ಒಂದು ವೇಳೆ ಯುವಕರು ಮೃತಪಟ್ಟಿದ್ದರೆ ಯಾರು ಹೊಣೆ, ಹೆಲ್ಮೆಟ್ ಧರಿಸಿದೆ ಬೈಕ್ ಚಲಾಯಿಸುತ್ತಿದ್ದರೆ ಅಂತಹ ಬೈಕ್‌ನ ಫೋಟೋ ತೆಗೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು. ಅದು ಬಿಟ್ಟು ಬೈಕ್‌ಗೆ ಅಡ್ಡಲಾಗಿ ಬ್ಯಾರಿಕೇಟ್ ಇಟ್ಟು ಪ್ರಾಣಕ್ಕೆ ಸಂಚಕಾರ ತರುವಂತಹ ಪ್ರಮೇಯವಾದರೂ ಏನು ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸಾರ್ವಜನಿಕರು ವೃತ್ತದಲ್ಲಿ ಹೆಚ್ಚಿನ ಸಂಖ್ಕೆಯಲ್ಲಿ ಸೇರಿದ ಕಾರಣ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಗಾಯಗೊಂಡು ರಕ್ತ ಸುರಿಯುತ್ತಿದ್ದರೂ ಯುವಕರು ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು. ಇದರಿಂದ ಮತ್ತಷ್ಟು ಆತಂಕ ಮನೆ ಮಾಡಿತ್ತು. ಸ್ಥಳಕ್ಕೆ ಡಿವೈಎಪ್ಪಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಸಿಗೊಳಿಸಿದರು. ಗಾಯಗೊಂಡವರನ್ನು ಮಿಮ್ಸ್‌ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.