ಸಾರಾಂಶ
ಬೆಂಗಳೂರು : ಪತ್ನಿಯ ಶೀಲ ಶಂಕಿಸಿ ಜಗಳ ಮಾಡುತ್ತಿದ್ದ ವ್ಯಕ್ತಿಯೊಬ್ಬ ರೊಚ್ಚಿಗೆದ್ದು ಮಚ್ಚಿನಿಂದ ಪತ್ನಿ, ಮಗಳು ಹಾಗೂ ಸಂಬಂಧಿಯನ್ನು ಬರ್ಬರವಾಗಿ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿ ಪೀಣ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.
ಜಾಲಹಳ್ಳಿ ಕ್ರಾಸ್‌ನ ಚೊಕ್ಕಸಂದ್ರದ ನಿವಾಸಿಗಳಾದ ಭಾಗ್ಯ(36), ಪುತ್ರಿ ನವ್ಯಾ(19), ಸಂಬಂಧಿ ಹೇಮಾವತಿ(23) ಕೊಲೆಯಾದ ದುರ್ದೈವಿಗಳು. ಆರೋಪಿ ಗಂಗರಾಜುನನ್ನು (42) ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಬುಧವಾರ ಸಂಜೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?:
ನೆಲಮಂಗಲ ಮೂಲದ ಗಂಗರಾಜು, ಪತ್ನಿ ಭಾಗ್ಯ ಮತ್ತು ಪುತ್ರಿ ನವ್ಯಾ ಜತೆಗೆ ಕಳೆದ ಆರು ವರ್ಷಗಳಿಂದ ಚೊಕ್ಕಸಂದ್ರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಈತ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಗೃಹಿಣಿಯಾಗಿದ್ದು, ಪುತ್ರಿ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇನ್ನು ಕೊಲೆಯಾದ ಹೇಮಾವತಿ ಅವರು ಭಾಗ್ಯಳ ಅಕ್ಕನ ಮಗಳು. ವಿಚ್ಛೇದಿತಳಾಗಿರುವ ಹೇಮಾವತಿ ಕೆಲ ತಿಂಗಳಿಂದ ಚಿಕ್ಕಮ್ಮ ಭಾಗ್ಯ ಅವರ ಮನೆಯಲ್ಲೇ ನೆಲೆಸಿದ್ದಳು. ಜತೆಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಪತ್ನಿಯ ಶೀಲ ಶಂಕಿಸಿ ಜಗಳ:
ಆರೋಪಿ ಗಂಗರಾಜು, ಪತ್ನಿ ಭಾಗ್ಯ ಶೀಲದ ಬಗ್ಗೆ ಅನುಮಾನಿಸುತ್ತಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಮಂಗಳವಾರ ಸಂಜೆ ಸಹ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಶುರುವಾಗಿದೆ. ಈ ವೇಳೆ ಮನೆಯಲ್ಲೇ ಇದ್ದ ಪುತ್ರಿ ನವ್ಯಾ ಹಾಗೂ ಸಂಬಂಧಿ ಹೇಮಾ ಭಾಗ್ಯ ಅವರ ಪರ ನಿಂತಿದ್ದಾರೆ. ಇದರಿಂದ ರೊಚ್ಚಿಗೆದ್ದ ಗಂಗರಾಜು ಮನೆಯಲ್ಲಿದ್ದ ಮಚ್ಚು ತೆಗೆದುಕೊಂಡು ಪತ್ನಿ ಭಾಗ್ಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ತಡೆಯಲು ಮುಂದಾದ ಪುತ್ರಿ ನವ್ಯಾ ಹಾಗೂ ಸಂಬಂಧಿ ಹೇಮಾವತಿ ಮೇಲೂ ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮೂವರು ಮಹಿಳೆಯರ ಕುತ್ತಿಗೆ ಮತ್ತು ಗಂಟಲು ಭಾಗಕ್ಕೇ ಆರೋಪಿ ಬಲವಾಗಿ ಮಚ್ಚಿನಿಂದ ಹಲವು ಬಾರಿ ಹಲ್ಲೆ ಮಾಡಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತ್ರಿವಳಿ ಕೊಲೆ ಬಳಿಕ
112ಕ್ಕೆ ಕರೆ ಮಾಡಿದ
ಮೂವರು ಸತ್ತಿರುವುದು ಖಚಿತವಾದ ಬಳಿಕ ಆರೋಪಿ ಗಂಗರಾಜು 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ತ್ರಿಬಲ್ ಮರ್ಡರ್ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರ ನಾನು ಪೊಲೀಸರಿಗೆ ಶರಣಾಗಲು ಸಿದ್ಧವಿರುವುದಾಗಿ ಹೇಳಿ ಘಟನಾ ಸ್ಥಳದ ಮಾಹಿತಿ ಹಂಚಿಕೊಂಡಿದ್ದಾನೆ. ತ್ರಿಬಲ್ ಮರ್ಡರ್ ಸುದ್ದಿಯ ಕರೆಯಿಂದ ಒಂದು ಕ್ಷಣ ಬೆಚ್ಚಿದ ಸಹಾಯವಾಣಿ ಸಿಬ್ಬಂದಿ, ಘಟನಾ ಸ್ಥಳದ ವ್ಯಾಪ್ತಿಯ ಹೊಯ್ಸಳ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ರಕ್ತಸಿಕ್ತ ಮಚ್ಚು ಹಿಡಿದು
ಠಾಣೆಗೆ ಬಂದು ಶರಣು
ಹೋಯ್ಸಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಗಂಗರಾಜು ರಕ್ತ ಸೋರುತ್ತಿದ್ದ ಮಚ್ಚು ಹಿಡಿದು ಸುಮಾರು 800 ಮೀಟರ್ ದೂರದಲ್ಲಿದ್ದ ಪೀಣ್ಯ ಪೊಲೀಸ್ ಠಾಣೆಗೆ ನಡೆದು ಬಂದಿದ್ದಾನೆ. ಬಳಿಕ ರಕ್ತಸಿಕ್ತ ಮಚ್ಚನ್ನು ಪೊಲೀಸರ ಮುಂದಿಟ್ಟು ತಾನು ಪತ್ನಿ, ಪುತ್ರಿ ಹಾಗೂ ಸಂಬಂಧಿಯನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಪೊಲೀಸರು ಸಹ ಈತನ ಹೇಳಿದ ಸುದ್ದಿ ಕೇಳಿ ಒಂದು ಕ್ಷಣ ಹೌಹಾರಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಘಟನಾಸ್ಥಳಕ್ಕೆ ದೌಡು
ತ್ರಿಬಲ್ ಮರ್ಡರ್ ವಿಷಯ ತಿಳಿದು ಸ್ಥಳೀಯ ಪೊಲೀಸರು, ಉತ್ತರ ವಿಭಾಗದ ಡಿಸಿಪಿ ಸೈದುಲ್ ಅದಾವತ್, ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಒಂದೇ ಕೋಣೆಯಲ್ಲಿ ಮೂವರು ಮಹಿಳೆಯರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಬಳಿಕ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕೆಲವು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ಪೊಲೀಸರು ಮೂವರ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆರೋಪಿ ಗಂಗರಾಜು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಹೋಂ ಗಾರ್ಡ್ ಆಗಿದ್ದ. ಜಾಲಹಳ್ಳಿ ಕ್ರಾಸ್‌ನಲ್ಲಿ ಪತ್ನಿ, ಪುತ್ರಿ ಹಾಗೂ ಸಂಬಂಧಿ ಜತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಬುಧವಾರ ಸಂಜೆ ಮಚ್ಚಿನಿಂದ ಮೂವರನ್ನು ಕೊಚ್ಚಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ.
-ವಿಕಾಸ್ ಕುಮಾರ್, ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ.