ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ : ಆಟೋಗೆ ಬೈಕ್‌ ಡಿಕ್ಕಿಯಾಗಿ ಸವಾರ ಸಾವು

| Published : Sep 03 2024, 01:31 AM IST / Updated: Sep 03 2024, 04:20 AM IST

ಸಾರಾಂಶ

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು ಮಧ್ಯ ಕುಳಿತಿದ್ದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರೆ ಇಬ್ಬರು ಸವಾರರು ಗಾಯಗೊಂಡಿದ್ದಾರೆ.

 ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ ಹೋಗುವಾಗ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಮಧ್ಯ ಕುಳಿತ್ತಿದ್ದ ಸವಾರ ಮೃತಪಟ್ಟು ಇಬ್ಬರು ಸವಾರರು ಗಾಯಗೊಂಡಿರುವ ಘಟನೆ ಸಿಟಿ ಮಾರ್ಕೆಟ್‌ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಜೆ.ನಗರದ ರಾಯಪುರ ನಿವಾಸಿ ಮೊಹಮ್ಮದ್‌ ನೌಹಿದುರ್‌ ರೆಹಮಾನ್‌(19) ಮೃತ ಸವಾರ. ಸವಾರ ಮೊಹಮ್ಮದ್‌ ಶೋಯೆಬ್‌ ಉಲ್ಲಾಖಾನ್‌ ಮತ್ತು ಹಿಂಬದಿ ಸವಾರ ಅಮೀರ್‌ ಫಸಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ರಾತ್ರಿ ಸುಮಾರು 8.30ಕ್ಕೆ ಬಿಜಿಎಸ್‌ ಮೇಲ್ಸೇತುವೆಯ ಜಾಮೀಯ ಮಸೀದಿ ಎದುರು ಈ ಘಟನೆ ನಡೆದಿದೆ.

ಮೂವರು ಯುವಕರು ಜೆ.ಜೆ.ನಗರದ ರಾಯಪುರ ನಿವಾಸಿಗಳಾಗಿದ್ದಾರೆ. ಆ.31ರಂದು ರಾತ್ರಿ ಸಿ.ಟಿ.ಮಾರ್ಕೆಟ್‌ ಕಡೆಯಿಂದ ಜೆ.ಜೆ.ನಗರದ ಕಡೆಗೆ ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡಿಂಗ್‌ ಹೊರಟ್ಟಿದ್ದರು. ಮಾರ್ಗದ ಬಿಜಿಎಸ್‌ ಮೇಲ್ಸೇತುವೆಯಲ್ಲಿ ಬರುವಾಗ, ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿಯಾದ ಪರಿಣಾಮ ಮೂವರು ಸವಾರರು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಮಧ್ಯೆ ಕುಳಿತ್ತಿದ್ದ ಮೊಹಮ್ಮದ್‌ ನೌಹಿದುರ್‌ ರೆಹಮಾನ್‌ಗೆ ಗಂಭೀರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಬಳಿಕ ಸ್ಥಳೀಯರು ಮೂವರು ಸವಾರರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ನೌಹಿದುರ್‌ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಅತಿವೇಗ-ನಿರ್ಲಕ್ಷ್ಯದ ಚಾಲನೆ

ತ್ರಿಬಲ್‌ ರೈಡಿಂಗ್‌ ವೇಳೆ ಮೊಹಮ್ಮದ್‌ ಶೋಯೆಬ್‌ ಉಲ್ಲಾಖಾನ್‌ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ. ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಘಟನೆ ವೇಳೆ ಮೂವರು ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಈ ಸಂಬಂಧ ಸಿ.ಟಿ. ಮಾರ್ಕೆಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.