ಹೊರ ರಾಜ್ಯದ ಇಬ್ಬರು ಡ್ರಗ್ಸ್‌ ಪೆಡ್ಲರ್ಸ್‌ ಬಂಧನ: 3 ಲಕ್ಷ ರು. ಮಾಲ್ಯದ ಡ್ರಗ್ಸ್‌ ಜಪ್ತಿ

| Published : Jan 13 2025, 01:32 AM IST / Updated: Jan 13 2025, 04:41 AM IST

drugs

ಸಾರಾಂಶ

ಹೊರ ರಾಜ್ಯದ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ ಮೂರು ಲಕ್ಷ ರುಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

  ಬೆಂಗಳೂರು : ಹೊರ ರಾಜ್ಯದ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ ಮೂರು ಲಕ್ಷ ರುಪಾಯಿ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ಬಂಧಿತರಾಗಿರುವ ಪಶ್ಚಿಮ ಬಂಗಾಳ ಮೂಲದ ಜಾನಿ ಖಾನ್‌(34) ಮತ್ತು ರಿಡಾಯ್‌ ಶೇಕ್‌(22) ಎಂಬುವರಿಂದ ₹3 ಲಕ್ಷ ಮೌಲ್ಯದ 35 ಗ್ರಾಂ ಯಾಬಾ ಟ್ಯಾಬ್ಲೆಟ್‌, 1 ಕೆ.ಜಿ. 747 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲ್‌ ಜಪ್ತಿ ಮಾಡಲಾಗಿದೆ.

ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದ ಅಪಾರ್ಟ್‌ಮೆಂಟ್‌ವೊಂದರ ಫ್ಲಾಟ್‌ನಲ್ಲಿ ನೆಲೆಸಿರುವ ಇಬ್ಬರು ವ್ಯಕ್ತಿಗಳು ನಿಷೇಧಿತ ಮಾದಕವಸ್ತುಗಳನ್ನು ಇರಿಸಿಕೊಂಡು ವಿದ್ಯಾರ್ಥಿಗಳು, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಬಂಧಿತ ಆರೋಪಿಗಳು ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಿಂದ ಪರಿಚಿತ ಡ್ರಗ್ಸ್‌ ಪೆಡ್ಲರ್‌ಗಳಿಂದ ನಿಷೇಧಿತ ಮಾದಕವಸ್ತುಗಳನ್ನು ಕಡಿಮೆ ಬೆಲೆಗೆ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.