ಸಾರಾಂಶ
ಬರಗಾಲದ ಕಾರಣ ಹಾಕಿದ ಬೆಳೆ ಕೈಗೆ ಸಿಗದೆ ನಷ್ಟ ಉಂಟಾಗಿತ್ತು. ಸಾಲಗಾರರ ಕಿರುಕುಳ, ಬೆಳೆ ಇಲ್ಲದೆ ಕಂಗಾಲಾದ ಮಹೇಶ್ ಶನಿವಾರ ತಮ್ಮ ಜಮೀನಿನ ಬಳಿ ವಿಷ ಸೇವಿಸಿ ಮೃತಪಟ್ಟಿದ್ದಾನೆ.
ಭಾರತೀನಗರ : ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕು ಸಬ್ಬನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಮಂಚೇಗೌಡರ ಪುತ್ರ ಎಸ್.ಎಂ.ಮಹೇಶ್ (48) ಮೃತಪಟ್ಟ ರೈತ. ಗ್ರಾಮದಲ್ಲಿ ಎರಡು ಎಕರೆ ಜಮೀನು ಹೊಂದಿದ್ದ ಮಹೇಶ್, ಸಾಲ ಮಾಡಿ ವ್ಯವಸಾಯ ಮಾಡುತ್ತಿದ್ದ. ಬರಗಾಲದ ಕಾರಣ ಹಾಕಿದ ಬೆಳೆ ಕೈಗೆ ಸಿಗದೆ ನಷ್ಟ ಉಂಟಾಗಿತ್ತು. ಸಾಲಗಾರರ ಕಿರುಕುಳ, ಬೆಳೆ ಇಲ್ಲದೆ ಕಂಗಾಲಾದ ಮಹೇಶ್ ಶನಿವಾರ ತಮ್ಮ ಜಮೀನಿನ ಬಳಿ ವಿಷ ಸೇವಿಸಿ ಅಸ್ವಸ್ಥನಾಗಿದ್ದ. ತಕ್ಷಣ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಯುವಕನ ಕೊಲೆಗೈದಿದ್ದ ಇಬ್ಬರು ಆರೋಪಿಗಳ ಬಂಧನ
ಮಂಡ್ಯ: ಕಳೆದ ಏ.9ರ ಯುಗಾದಿ ಹಬ್ಬದಂದು ಯುವಕನನ್ನು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ಪೂರ್ವಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಸ್ವರ್ಣಸಂದ್ರ ಬಡಾವಣೆಯ ಕೆಂಪೇಗೌಡ ಬೀದಿ ನಿವಾಸಿ ಅಕ್ಷಯ್ ಗೌಡನನ್ನು ದಾಸೇಗೌಡನ ಬೀದಿಯ ನಾಗಲಿಂಗೇಶ್ವರ ದೇಗುಲದ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು, ಈತನ ಸ್ನೇಹಿತ ಹೇಮಂತ್ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೂರ್ವಠಾಣೆ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಅದೇ ಬಡಾವಣೆಯ ಭರತ ಅಲಿಯಾಸ್ ಸಾಹುಕಾರ ಹಾಗೂ ಚಿಕ್ಕೇಗೌಡನದೊಡ್ಡಿಯ ಪ್ರಮೋದ್ ಅಲಿಯಾಸ್ ಕಾಡು ಅವರನ್ನು ಖಚಿತ ಮಾಹಿತಿ ಮೇರೆಗೆ ಮದ್ದೂರು - ಕೆ.ಎಂ.ದೊಡ್ಡಿ ರಸ್ತೆಯಲ್ಲಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ ಐ ಶೇಷಾದ್ರಿಕುಮಾರ್ , ಎಎಸ್ ಐ ಲಿಂಗರಾಜು, ಸಿಬ್ಬಂದಿ ಪಾಲ್ಗೊಂಡಿದ್ದರು.