ಮಳವಳ್ಳಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ - ಇಬ್ಬರು ಕದೀಮರ ಬಂಧನ

| Published : Oct 28 2024, 01:02 AM IST / Updated: Oct 28 2024, 04:17 AM IST

ಸಾರಾಂಶ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕಿರುವಾಗಲು ಪೊಲೀಸರು ಬಂಧಿಸಿದ್ದಾರೆ.

 ಮಳವಳ್ಳಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕಿರುವಾಗಲು ಪೊಲೀಸರು ಬಂಧಿಸಿದ್ದಾರೆ.

ಕಿರುಗಾವಲು ನಿವಾಸಿ ಮಹಮ್ಮದ್ ಸುಮೇದ್ (27) ಹಾಗೂ ಬೆಂಗಳೂರಿನ ಸೈಯದ್ ಸೈಫ್ (26) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 8.5 ಲಕ್ಷ ರು.ಮೌಲ್ಯದ 114 ಗ್ರಾಂ. ತೂಕದ ಚಿನ್ನದ ವಿವಿಧ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟೇಗೌಡನಕೊಪ್ಪಲು ಗ್ರಾಮದ ಸುರೇಶ್ ಎಂಬುವರು ಆಗಸ್ಟ್ 15ರಂದು ತಾಯಿಯ ಆನಾರೋಗ್ಯ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬೆಂಗಳೂರಿನ ಆಸ್ಪತ್ರೆಗೆ ತೆರಳುತ್ತಿದ್ದರು. ಆಗಸ್ಟ್ 19 ರಂದು ಪಕ್ಕದ ಮನೆಯ ಸ್ನೇಹಿತರೊಬ್ಬರು ಕರೆ ಮಾಡಿ ನಿಮ್ಮ ಮನೆಯ ಬಾಗಿಲು ಮುರಿದಿರುವ ಬಗ್ಗೆ ಸುರೇಶ್ ಅವರಿಗೆ ತಿಳಿಸಿದರು.

ಕೂಡಲೇ ಗ್ರಾಮಕ್ಕೆ ಬಂದು ಪರಿಶೀಲಿಸಿದ ವೇಳೆ ಮನೆಯ ಬಾಗಿಲು ಮುರಿದ ಕಳ್ಳರು ಬೀರಿನ ಬಾಗಿಲು ಮೀಟಿ 114 ಗ್ರಾ.ತೂಕದ ವಿವಿಧ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ ಹಾಗೂ ಗಂಗಾಧರಸ್ವಾಮಿ, ಡಿವೈಎಸ್ಪಿ ಡಿ.ಕೃಷ್ಣಪ್ಪ ಅವರ ಮಾರ್ಗದರ್ಶನ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಕಿರುಗಾವಲು ಪೊಲೀಸ್ ಠಾಣೆಯ ಪಿಎಸ್ಐ ಡಿ.ರವಿಕುಮಾರ್ ಹಾಗೂ ಸಿಬ್ಬಂದಿ ರಿಯಾಜ್ ಪಾಷ, ಪ್ರಭುಸ್ವಾಮಿ, ಎಂ.ಕೆ.ನಾಗೇಂದ್ರ, ಜಯಕುಮಾರ್, ಮಹೇಶ್, ಮಹೇಂದ್ರ, ಶ್ರೀನಿವಾಸ್, ಮಧುಕಿರಣ್, ಸಿದ್ದರಾಜು, ಮಲ್ಲಿಕಾರ್ಜುನ ಚುಳಕಿ, ಅನಿಲ್, ಎನ್.ಸಿ.ಶಿವಕುಮಾರ್, ರವಿಕಿರಣ್, ಲೋಕೇಶ್, ಮಹದೇವಸ್ವಾಮಿ, ಪ್ರೀತಿಕುಮಾರ್ ಆರೋಪಿಗಳನ್ನು ಬಂಧಿಸಿ 8.5 ಲಕ್ಷ ಮೌಲ್ಯದ 114 ಗ್ರಾಂ. ತೂಕದ ಚಿನ್ನದ ಒಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವೊಂದನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಸುಮೇದ್ ಬೆಂಗಳೂರಿನ ಪರಿಚಯಸ್ಥ ಸೈಯದ್ ಸೈಫ್ ಕರೆಸಿಕೊಂಡು ರಾತ್ರಿ ವೇಳೆ ಯಾರೂ ಇಲ್ಲದ ಮನೆಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.

ಬಸ್‌ ಹತ್ತುವಾಗ ನೂಕುನುಗ್ಗಲು: ಚಿನ್ನದ ಮಾಂಗಲ್ಯಸರ ಕಳವು

ಮಳವಳ್ಳಿ : ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಜೆ ಬಸ್ ಹತ್ತುವ ನೂಕುನುಗ್ಗಲಿನಲ್ಲಿ ಬೆಂಗಳೂರಿನ ನಾಗರಭಾವಿಯ ಶಾಂತಕುಮಾರಿ ಎಂಬುವರು 40 ಗ್ರಾಂ.ತೂಕದ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ.

ಬೆಂಗಳೂರಿನಿಂದ ಸಂಬಂಧಿಕರ ಜತೆ ತಾಲ್ಲೂಕಿನ ಶಿವನಸಮುದ್ರದ ಶ್ರೀ ಮಾರಮ್ಮನ ದೇವಸ್ಥಾನ ಬಂದಿದ್ದ ಶಾಂತಕುಮಾರಿ ದೇವರ ದರ್ಶನ ಪಡೆದು ವಾಪಾಸ್ ಬೆಂಗಳೂರಿಗೆ ತೆರಳಲು ಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುವ ವೇಳೆ ಸಾಕಷ್ಟು ನೂಕುನಗ್ಗಲು ಉಂಟಾಗಿತ್ತು. ಬಸ್ ಹತ್ತಿದ ನಂತರ ಮಾಂಗಲ್ಯ ಸರ ಕಳವಾಗಿರುವುದನ್ನು ಗಮನಿಸಿದ ಮಹಿಳೆ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಿಸಿ ಟಿವಿಗಳನ್ನು ಪರಿಶೀಲಿಸಿದರು. ಈ ಸಂಬಂಧ ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.