ಸಾರಾಂಶ
ಮದ್ದೂರು : ಪ್ರೀತಿ ವಿಚಾರವಾಗಿ ಎರಡು ಕುಟುಂಬಸ್ಥರ ನಡುವೆ ಮಾರಾಮಾರಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಗೊರವನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಗ್ರಾಮದ ವೆಂಕಟೇಗೌಡನ ಪುತ್ರ ಹನುಮಂತ (40) ಕೊಲೆಯಾದವನು. ಈತನ ಮೇಲೆ ಅದೇ ಗ್ರಾಮದ ಪ್ರತಾಪ ಕಾಂಕ್ರೀಟ್ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ. ಈತನ ರಕ್ಷಣೆಗೆ ಧಾವಿಸಿದ ಚಿಕ್ಕತಾಯಮ್ಮರ ಮೇಲೂ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಹನುಮಂತ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಕೊಲೆಯಾದ ಆರೋಪಿ ಹನುಮಂತ ಲಾರಿ ಡ್ರೈವರ್ ಆಗಿದ್ದು, ಈತನ ನಾದಿನಿಯನ್ನು ಪ್ರತಾಪ ಪ್ರೀತಿಸುತ್ತಿದ್ದನು. ಈ ಬಗ್ಗೆ ಹಲವಾರು ಬಾರಿ ನ್ಯಾಯ ಪಂಚಾಯ್ತಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಪ್ರತಾಪ ಪಾನಮತ್ತನಾಗಿ ತನ್ನ ಮನೆ ಬಳಿ ಬಂದಿದ್ದಾನೆ.
ಈ ವೇಳೆ ಸ್ಥಳದಲ್ಲಿದ್ದ ಹನುಮಂತ ಮತ್ತು ಪ್ರತಾಪನ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ಗಲಾಟೆಯಾಗಿದೆ. ರೊಚ್ಚಿಗೆದ್ದ ಆರೋಪಿ ಪ್ರತಾಪ ಏಕಾಏಕಿ ರಸ್ತೆ ಬದಿ ಇದ್ದ ಕಾಂಕ್ರೀಟ್ ಕಲ್ಲುಗಳಿಂದ ಹನುಮಂತನ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಈತನ ರಕ್ಷಣೆಗೆ ಬಂದ ಹನುಮಂತನ ತಾಯಿ ಚಿಕ್ಕತಾಯಮ್ಮನ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಅವರು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಮದ್ದೂರು ಪೊಲೀಸರು ಆರೋಪಿ ಪ್ರತಾಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.