ಸಾರಾಂಶ
ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ಬಸನಗೌಡ ದದ್ದಲ್ ಹಾಗೂ ನಾಗೇಂದ್ರ ಅವರ ನಿವಾಸಗಳ ಮೇಲೆ ಬುಧವಾರ ಇ.ಡಿ. ಕಾರ್ಯಾಚರಣೆ ಕೈಗೊಂಡಿದೆ.
ಬೆಂಗಳೂರು : ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣದ ಉರುಳು ಮಾಜಿ ಸಚಿವ ಬಿ.ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ಗೆ ಬಲವಾಗಿ ಸುತ್ತಿಕೊಳ್ಳುತ್ತಿದ್ದು, ಅವರಿಬ್ಬರಿಗೆ ಸೇರಿದ ಸ್ಥಳಗಳು ಸೇರಿದಂತೆ ಯೂನಿಯನ್ ಬ್ಯಾಂಕ್ ಸಿಬ್ಬಂದಿಯ ನಿವಾಸ, ಕಚೇರಿ ಸೇರಿ 18 ಕಡೆ ಏಕಕಾಲಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಮಂಗಳವಾರವಷ್ಟೇ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ಬಸನಗೌಡ ದದ್ದಲ್ ಹಾಗೂ ನಾಗೇಂದ್ರ ಅವರ ನಿವಾಸಗಳ ಮೇಲೆ ಬುಧವಾರ ಇ.ಡಿ. ಕಾರ್ಯಾಚರಣೆ ಕೈಗೊಂಡಿದೆ.
ಇದೇ ವೇಳೆ ನಾಗೇಂದ್ರ ಆಪ್ತ ಸಹಾಯಕ ಹರೀಶ್‌ನನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ರಾತ್ರಿ ವಾಪಸ್ ಕಳುಹಿಸಿದರು. ಅಲ್ಲದೇ, ಇ.ಡಿ. ಅಧಿಕಾರಿಗಳು ಬಳ್ಳಾರಿಯಲ್ಲಿ ನಾಗೇಂದ್ರ ಅವರ ಆಪ್ತ ಸಹಾಯಕರಾದ ವಿಜಯ್‌ಕುಮಾರ್ ಮತ್ತು ಚೇತನ್ ಅವರನ್ನು ಹಾಗೂ ನಾಗೇಂದ್ರ ಅವರನ್ನು ಮನೆಯಲ್ಲಿಯೇ ಸುದೀರ್ಘ ವಿಚಾರಣೆ ನಡೆಸಿದರು.
ಈ ನಡುವೆ, ಜಾರಿ ನಿರ್ದೇಶನಾಲಯ ಬಿ.ನಾಗೇಂದ್ರ ಅವರನ್ನು ಬಂಧಿಸುವ ಸಾಧ್ಯತೆ ಇದೆ. ದದ್ದಲ್ ಅವರನ್ನು ವಶಕ್ಕೆ ಪಡೆಯುವ ಸಂಭವವಿದೆ ಎನ್ನಲಾಗಿದೆ. ಬುಧವಾರ ಇಡೀ ದಿನ ಬೆಂಗಳೂರು, ಬಳ್ಳಾರಿ, ರಾಯಚೂರು, ಹೈದರಾಬಾದ್‌ನಲ್ಲಿ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ನಾಗೇಂದ್ರ ಅವರ ಆಪ್ತ ಸಹಾಯಕರನ್ನು ವಿಚಾರಣೆಗೊಳಪಡಿಸಿ ನಾಗೇಂದ್ರ ಪಾತ್ರದ ಕುರಿತು ವಿವರಣೆಯನ್ನು ಪಡೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಹಗರಣದಲ್ಲಿ ನಾಗೇಂದ್ರ ಭಾಗಿಯಾಗಿರುವ ಸಂಬಂಧ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಾಗೇಂದ್ರ ಬಂಧನ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಸಹ ನಾಗೇಂದ್ರ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಇ.ಡಿ. ಅಧಿಕಾರಿಗಳು ಈ ಸಂಬಂಧ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಾಗೇಂದ್ರ ನೋಡಿ ಅಂಜುತ್ತಿದ್ದ ಹರೀಶ್!:
ನಾಗೇಂದ್ರ, ಬಸನಗೌಡ ದದ್ದಲ್ ಸೇರಿದಂತೆ ಇತರರನ್ನು ಮನೆಯಲ್ಲಿಯೇ ವಿಚಾರಣೆ ನಡೆಸಿದರೆ, ಹರೀಶ್‌ನನ್ನು ಮಾತ್ರ ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದು ಶಾಂತಿನಗರದ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದರು. ನಾಗೇಂದ್ರ ಅವರನ್ನು ನೋಡಿ ಹೆದರಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಇ.ಡಿ. ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು. ನಂತರ ರಾತ್ರಿ 9 ಗಂಟೆ ಸುಮಾರಿಗೆ ವಾಪಸ್ ಕಳುಹಿಸಲಾಯಿತು. ಕರೆದಾಗ ವಿಚಾರಣೆ ಬರುವಂತೆ ಸೂಚಿಸಿ ಕಳುಹಿಸಿಕೊಡಲಾಯಿತು ಎಂದು ಮೂಲಗಳು ಹೇಳಿವೆ.
18 ಕಡೆ ಶೋಧ:
ಬುಧವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡ ಇ.ಡಿ. ಅಧಿಕಾರಿಗಳು ಬೆಂಗಳೂರು, ಬಳ್ಳಾರಿ, ರಾಯಚೂರು ಮತ್ತು ಹೈದರಾಬಾದ್‌ನಲ್ಲಿ ಒಟ್ಟು 18 ಸ್ಥಳಗಳಲ್ಲಿ ಶೋಧ ನಡೆಸಿದರು. ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಸೇರಿದ ನಿವಾಸ, ಕಚೇರಿಗಳಲ್ಲಿ ತೀವ್ರ ತಪಾಸಣೆ ನಡೆಸಿದರು.
ವಸಂತನಗರದಲ್ಲಿನ ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿ, ನಾಗೇಂದ್ರ ಅವರ ಡಾಲರ್ಸ್ ಕಾಲೋನಿಯಲ್ಲಿನ ರಾಮ್ಕಿ ಉತ್ಸವ್ ಫ್ಲಾಟ್, ಬಳ್ಳಾರಿಯಲ್ಲಿನ ನಿವಾಸ, ಕಚೇರಿ, ಬಸನಗೌಡ ದದ್ದಲ್ ಅವರ ಯಲಹಂಕದ ಬಳಿಯ ನಿವಾಸ, ರಾಯಚೂರಿನಲ್ಲಿನ ನಿವಾಸ ಮತ್ತು ಶಾಸಕರ ಭವನದಲ್ಲಿನ ಇಬ್ಬರ ಕೊಠಡಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಸುಚಿಸ್ಮಿತಾ, ದೀಪಾ, ಕೃಷ್ಣಮೂರ್ತಿ ಅವರ ನಿವಾಸಗಳ ಮೇಲೆ ಕಾರ್ಯಾಚರಣೆ ಕೈಗೊಂಡು ತೀವ್ರ ತಪಾಸಣೆ ನಡೆಸಲಾಗಿದೆ. ಈ ನಡುವೆ, ಶಾಸಕರ ಆಪ್ತರ ನಿವಾಸಗಳಲ್ಲಿಯೂ ಶೋಧ ನಡೆಸಲಾಗಿದೆ.
ಪೊಲೀಸರಿಗೂ ತಿಳಿಸದೇ ದಾಳಿ!:
ಶೋಧ ಕಾರ್ಯದ ವೇಳೆ ಹಣದ ವಹಿವಾಟಿನ ಕಾಗದ ಪತ್ರಗಳು, ಮೊಬೈಲ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳೀಯ ಪೊಲೀಸರಿಗೆ ಯಾವುದೇ ಸುಳಿವು ನೀಡದೆ ಸಿಆರ್‌ಪಿಎಫ್ ಭದ್ರತೆಯೊಂದಿಗೆ ದಾಳಿ ಡೆಸಲಾಗಿದೆ. ನಾಗೇಂದ್ರ ಮತ್ತು ಬಸನಗೌಡ ದದ್ದಲ್ ನಿವಾಸಗಳ ಮೇಲೆ ಕಾರ್ಯಾಚರಣೆ ಕೈಗೊಂಡಾಗ ಇಬ್ಬರ ಕುಟುಂಬ ಸದಸ್ಯರು ಮನೆಯಲ್ಲಿದ್ದರು. ಈ ವೇಳೆ ಎಲ್ಲರ ಬಳಿಯ ಮೊಬೈಲ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಅಲ್ಲದೇ, ಮನೆಗೆಲಸದವರ ವಿಚಾರಣೆಯನ್ನು ಸಹ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ಸಂಬಂಧ ರಾಜ್ಯ ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ಅಧಿಕಾರಿಗಳ ಬಂಧನಕ್ಕೊಳಗಾಗಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪದ್ಮನಾಭ ಪೊಲೀಸರಿಗೆ ವಿಚಾರಣೆ ವೇಳೆ ಅಗತ್ಯ ಮಾಹಿತಿಗಳನ್ನು ನೀಡಿದ್ದ. ಈ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಇ.ಡಿ. ಅಧಿಕಾರಿಗಳಿಗೆ ರವಾನಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ಕಾರ್ಯಚರಣೆ ಕೈಗೊಳ್ಳಲು ಮುಂದಾದ ಇಡಿ ಅಧಿಕಾರಿಗಳು ಬುಧವಾರ ಬೆಳ್ಳಂಬೆಳ್ಳಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಹವಾಲಾ ಹಣದಲ್ಲಿ ನಾಗೇಂದ್ರ ಆಪ್ತ ಹರೀಶ್ ಪಾತ್ರ
ಅಕ್ರಮ ಹಣ ವರ್ಗಾವಣೆಯಲ್ಲಿ ಸಚಿವರ ಪರವಾಗಿ ಅವರ ಆಪ್ತ ಹರೀಶ್ ನಿಗಮದ ಅಧಿಕಾರಿಗಳಿಗೆ ಒತ್ತಡ ಹಾಕಿದ್ದು, ಮೌಖಿಕ ಸೂಚನೆ ನೀಡಿದ್ದ ಎಂಬುದು ಇ.ಡಿ. ವಿಚಾರಣೆ ವೇಳೆ ತಿಳಿದು ಬಂದಿದೆ.
ಹೈದರಾಬಾದ್‌ನ ಆರೋಪಿ ಸತ್ಯನಾರಾಯಣ ವರ್ಮಾನಿಂದ ಬಂದಿದ್ದ ಹಣ ಹರೀಶ್‌ಗೆ ತಲುಪಿತ್ತು. ಅದನ್ನು ಅವ್ಯವಹಾರಕ್ಕೆ ಬಳಕೆ ಮಾಡಿಕೊಂಡಿದ್ದ. ಅಲ್ಲದೇ, ಬಿಬಿಎಂಪಿ ಕಚೇರಿಯ ಶ್ರೀನಿಧಿ ಸಾಗರ್ ಹೋಟೆಲ್ ಬಳಿ ನಿಗಮದ ಅಧಿಕಾರಿ ಪದ್ಮನಾಭ ಅವರಿಂದ 25 ಲಕ್ಷ ರು. ಪಡೆದಿದ್ದ. ಇದರ ಜತೆಗೆ ನಾಗೇಂದ್ರ ಅವರ ಪರವಾಗಿ ಹವಾಲಾ ಹಣ ಮತ್ತು ಚಿನ್ನದ ಬಿಸ್ಕೆಟ್ ಪಡೆದುಕೊಂಡಿದ್ದನು ಎಂದು ಹೇಳಲಾಗಿದೆ. ಅಲ್ಲದೇ, 50-60 ಕೋಟಿ ರು. ವ್ಯವಹಾರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇಷ್ಟೆಲ್ಲಾ ವಿಚಾರದಲ್ಲಿ ಹರೀಶ್‌ನ ಪಾತ್ರ ಇರುವ ಬಗ್ಗೆ ಇ.ಡಿ. ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಅತನನ್ನು ವಿಚಾರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ಹಿನ್ನೆಲೆ
ಮೇ 26ರಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಕಚೇರಿಯ ಅಧಿಕಾರಿ ಚಂದ್ರಶೇಖರನ್ ಶಿವಮೊಗ್ಗದ ವಿನೋಬಾ ನಗರದಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬರೆದ ಡೆತ್‌ನೋಟ್‌ನಲ್ಲಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ 183 ಕೋಟಿ ರು. ಹಗರಣದ ಬಗ್ಗೆ ಉಲ್ಲೇಖ ಮಾಡಿದ್ದರು.
ಮಾಜಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದ ಮೇರೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೇರೆ ಶಾಖೆಯಲ್ಲಿದ್ದ ವಾಲ್ಮೀಕಿ ನಿಗಮದ ಖಾತೆಯನ್ನು ಎಂ.ಜಿ. ರೋಡ್ ಶಾಖೆಗೆ ವರ್ಗಾಯಿಸಲಾಗಿತ್ತು. ಆದರೆ, ಹೊಸ ಶಾಖೆಗೆ ಬಂದ ನಂತರ ಕೆಲಸದ ಒತ್ತಡದಿಂದ ಹೊಸ ಚೆಕ್ ಬುಕ್, ಪಾಸ್ ಬುಕ್ ತರಲು ಆಗಿರಲಿಲ್ಲ. ಅಷ್ಟರೊಳಗೆ, ವರ್ಗಾವಣೆಗೊಂಡ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಅನಧಿಕೃತವಾಗಿ ಹಣ ವರ್ಗಾವಣೆ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳು, ಸಚಿವರು ಹಾಗೂ ವಾಲ್ಮೀಕಿ ನಿಗಮದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದರಲ್ಲಿ ತಮ್ಮ ಪಾತ್ರವಿಲ್ಲದಿದ್ದರೂ ತಮ್ಮನ್ನು ಸಿಕ್ಕಿಹಾಕಿಸುವ ಪ್ರಯತ್ನ ಮಾಡುತ್ತಿದೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು.
ಚಂದ್ರಶೇಖರನ್ ಸಾವಿನ ಬಳಿಕ ದೊಡ್ಡ ವಿವಾದಕ್ಕೆ ಕಾರಣವಾಗಿ ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು. ಜೂ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ರಾಜೀನಾಮೆ ನೀಡಿದ್ದರು. ಈ ನಡುವೆ, ರಾಜ್ಯ ಸರ್ಕಾರ ಈ ಹಗರಣವನ್ನು ಎಸ್ಐಟಿ ಮೂಲಕ ತನಿಖೆಗೊಳಪಡಿಸಿತು. ಬ್ಯಾಂಕ್ ಅಧಿಕಾರಿಗಳು ಭಾಗಿ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಕೈಗೊಂಡಿದೆ. ಅಲ್ಲದೇ, ಕೋಟ್ಯಂತರ ರು. ಅಕ್ರಮವಾಗಿರುವ ಕಾರಣ ಇ.ಡಿ. ಪ್ರವೇಶಿಸಿ ತನಿಖೆ ಕೈಗೊಂಡಿದೆ.